ಬೆಂಗಳೂರು: ರಾಜ್ಯಾದ್ಯಂತ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಬಿರುಗಾಳಿ ಸಹಿತ ಮಳೆಗೆ (Rain alert) ಕೆಲವೆಡೆ ಮರಗಳು ಧರೆಗುರುಳಿದ್ದರೆ, ಮನೆಯ ಶೀಟ್‌ಗಳು ಹಾರಿ ಹೋಗಿವೆ. ಸಿಡಿಲಿಗೆ ಕುರಿಗಳು ಮೃತಪಟ್ಟಿವೆ.
ಈ ನಡುವೆ ಇನ್ನೆರಡು ದಿನಗಳು ಭಾರಿ ಮಳೆಯಾಗುವ (Rain Update) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.
ವಿಜಯನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಿಡಿಲಿಗೆ ಆರು ಕುರಿಗಳು ಮೃತಪಟ್ಟಿವೆ. ಕೊಟ್ಟೂರು ಪಟ್ಟಣದ ಕೆರೆ ಸಮೀಪದ ಹಟ್ಟಿಯಲ್ಲಿ ರಾಜಪ್ಪ ಎಂಬುವರಿಗೆ ಸೇರಿದ ಆರು ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಜತೆಗೆ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿಯ ಕೊಲುಮೆಹಟ್ಟಿಯಲ್ಲಿ ಮರ ಬಿದ್ದು ಶಾಲಾ ಕಾಂಪೌಂಡ್, ವಿದ್ಯುತ್ ಕಂಬಗಳು ಧರೆಗುರುಳಿವೆ. ಕಾನಾಮಡಗು ದಲಿತರ ಕಾಲೋನಿಯ ಮನೆಗಳಿಗೆ ನೀರು ನುಗ್ಗಿದೆ. ಬಿರುಗಾಳಿಗೆ ನಾಲ್ಕು ಮನೆಗಳ ತಗಡಿನ ಶೀಟ್‌ಗಳು ಗಾಳಿವೆ ಹಾರಿ ಹೋಗಿವೆ.
ಈ ಜಿಲ್ಲೆಗಳಿಗೆ ಮಳೆ ಅಲರ್ಟ್
ಮೇ 30 ಮಂಗಳವಾರದಂದು ಹಾವೇರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಬಿಜಾಪುರ ಹಾಗೂ ಧಾರವಾಡ, ಗದಗ, ಕಲಬುರಗಿ, ಹಾಸನ, ಶಿವಮೊಗ್ಗ, ತುಮಕೂರು ಹಾಗೂ ಉಡುಪಿ, ಉತ್ತರ ಕನ್ನಡ, ವಿಜಯನಗರ, ಯಾದಗಿರಿಯಲ್ಲಿ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಳಗಾವಿ, ಕೊಪ್ಪಳ, ಚಿಕ್ಕಮಗಳೂರಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು ಗಾಳಿ ವೇಗವು ಗಂಟೆಗೆ 40-50 ಕಿ.ಮೀ ಇರಲಿದೆ. ಹೀಗಾಗಿ ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಇರುವಂತೆ ಸಲಹೆ ನೀಡಲಾಗಿದೆ. ರಾಜಧಾನಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ.
ನೆಲಕ್ಕುರಳಿದ ವಿದ್ಯುತ್ ಕಂಬಗಳು, ಮರಗಳು
ಹಾಸನದಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. ಭಾರಿ ಮಳೆಗೆ ವಿದ್ಯುತ್ ಕಂಬಗಳು, ಬೃಹತ್ ಗಾತ್ರದ ಮರಗಳು ನೆಲಕ್ಕುರಳಿವೆ. ಬೇಲೂರು-ಚೀಕನಹಳ್ಳಿ,-ಮೂಡಿಗೆರೆ ರಸ್ತೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, ಮೂರು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಬಿರುಗಾಳಿಗೆ ಹುಸೇನ್ ಎಂಬುವವರ ವಾಸದ ಮನೆಯ ಚಾವಣಿ ಹಾರಿ ಹೋಗಿ ಪಕ್ಕದ ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇತ್ತ ಕೋನೆರ್ಲು ಗ್ರಾಮದಲ್ಲಿ ನೂರಾರು ಬಾಳೆ ಗಿಡಗಳು ನೆಲಸಮವಾಗಿದೆ. ಧರ್ಮೇಗೌಡ ಎಂಬುವವರ ಜಮೀನಿನಲ್ಲಿ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬಳ್ಳೂರು ಗ್ರಾಮ ಸೇರಿದಂತೆ ಹಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ನೆಲಕ್ಕುರುಳಿದ ಮರಗಳನ್ನು ಸಾರ್ವಜನಿಕರೇ ತೆರವುಗೊಳಿಸುತ್ತಿದ್ದಾರೆ. ಅಪಾರ ಹಾನಿ ಸಂಭವಿಸಿದ್ದರು ಸ್ಥಳಕ್ಕೆ ಬಾರದ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗುಡುಗು ಸಹಿತ ಜೋರು ಮಳೆಯಾಗುತ್ತಿದೆ. ಶಿವಮೊಗ್ಗ, ಹೊಸನಗರ, ಸಾಗರ, ತೀರ್ಥಹಳ್ಳಿಯ ಮಂಗಳವಾರ ಬೆಳಗ್ಗೆಯಿಂದ ಮಳೆ ಹಿಡಿದುಕೊಂಡಿದೆ. ನದಿ, ಕೆರೆಗಳಲ್ಲಿ ನೀರಿನ ಮಟ್ಟ ಏರುತಿದೆ. ಉಡುಪಿಯಲ್ಲೂ ಧಾರಾಕಾರ ಮಳೆಯಾಗುತ್ತಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ಉಷ್ಣಾಂಶ ಹೀಗಿದೆ;
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 40 ಡಿ.ಸೆ – 26 ಡಿ.ಸೆ
ಗದಗ: 37 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 22 ಡಿ.ಸೆ
ಬೆಳಗಾವಿ: 36 ಡಿ.ಸೆ – 22 ಡಿ.ಸೆ
ಕಾರವಾರ: 37 ಡಿ.ಸೆ – 27 ಡಿ.ಸೆ
ಮಂಗಳೂರು: 34 ಡಿ.ಸೆ – 25 ಡಿ.ಸೆ
ಹೊನ್ನಾವರ: 34 ಡಿ.ಸೆ- 25 ಡಿ.ಸೆ
ಬೆಂಗಳೂರು ನಗರ: 33 ಡಿ.ಸೆ – 22 ಡಿ.ಸೆ
1/2ಮುಂದಿನ 3 ಗಂಟೆಗಳಲ್ಲಿ ಹಾವೇರಿ, ರಾಯಚೂರು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. Source: IMD-Bengaluru
— Karnataka State Natural Disaster Monitoring Centre (@KarnatakaSNDMC) May 30, 2023
Issued by : Karnataka SNDMC SDMA
Issued on : 30 May, 07:30
Validity Time : 30 May, 10:30 pic.twitter.com/AmvvkHGyhA
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ