ಬೆಂಗಳೂರು/ಕಾರವಾರ: ಕರಾವಳಿ ಭಾಗದಲ್ಲಿ ಮುಂಗಾರು ಚುರುಕು ಪಡೆದುಕೊಂಡಿದ್ದು, ಧಾರಾಕಾರ ಮಳೆಯಿಂದಾಗಿ (Rain news) ಗುಡ್ಡ ಕುಸಿದಿದೆ. ನಿನ್ನೆ ಸಂಜೆ (ಜೂ.26) ಸುರಿದ ಭಾರಿ ಮಳೆಗೆ ಗುಡ್ಡದಿಂದ ಬಂಡೆಗಲ್ಲು ಕುಸಿದಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ತಂಡ್ರಕುಳಿ ಗ್ರಾಮದಲ್ಲಿ ಬಂಡೆಗಲ್ಲು ಮನೆಗೆ (weather report) ಅಪ್ಪಳಿಸಿದೆ.
ರಾಷ್ಟ್ರೀಯ ಹೆದ್ದಾರಿಯ ಕೆಳಗಿರುವ ಮನೆಗಳಿಗೆ ಹೊಂದಿಕೊಂಡಿದ್ದ ಗುಡ್ಡದಿಂದ ಬಂಡೆ ಕುಸಿದು ಗೋಡೆಗೆ ಬಡಿದಿದೆ. ಗ್ರಾಮದ ಗಣೇಶ ತುಳಸು ಅಂಬಿಗ ಎಂಬುವವರ ಮನೆಗೆ ಬಂಡೆಗಲ್ಲು ಬಿದ್ದಿದ್ದು, ಅದೃಷ್ಟವಶಾತ್ ದುರಂತವೊಂದು ತಪ್ಪಿದೆ. ಬಂಡೆ ಅಪ್ಪಳಿಸಿದ ಪರಿಣಾಮ ಮನೆಯ ಗೋಡೆಗೆ ಬಿರುಕು ಬಿಟ್ಟಿದೆ. ಕುಟುಂಬಸ್ಥರು ಮನೆಯಲ್ಲಿದ್ದಾಗಲೇ ಈ ಅವಘಡ ನಡೆದಿದೆ. ಜೂ.28ರಂದು ಗಣೇಶ ಅವರ ಮನೆಯಲ್ಲಿ ಮದುವೆ ಕಾರ್ಯ ನಿಗದಿಯಾಗಿತ್ತು. ಮದುವೆಗಾಗಿ ಮನೆಯನ್ನು ಸಿಂಗಾರ ಮಾಡಲಾಗಿತ್ತು.
ಈ ಹಿಂದೆ 2017ರಲ್ಲಿ ಇದೇ ಗ್ರಾಮದಲ್ಲಿ ಗುಡ್ಡಕುಸಿತ ಅವಘಡ ನಡೆದಿತ್ತು. ಈ ವೇಳೆ ಮೂವರು ಮಕ್ಕಳು ಜೀವಂತ ಸಮಾಧಿ ಆಗಿದ್ದರು. ಇದೀಗ ಮತ್ತೆ ಭಾರಿ ಮಳೆಗೆ ಗುಡ್ಡ ಕುಸಿಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೀಡು ಮಾಡಿದೆ.
ಇದನ್ನೂ ಓದಿ: Kunigal MLA: ಬಡ ಮಹಿಳೆಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ಶಾಸಕ ಡಾ. ರಂಗನಾಥ್
ಕಡಲತಡಿಯಲ್ಲಿ ಮುಂಗಾರು ಮಳೆ ಅಬ್ಬರ
ಮಂಗಳೂರಿನಲ್ಲಿ ಮಂಗಳವಾರ ಧಾರಾಕಾರ ಮಳೆಯಾಗುತ್ತಿದೆ. ಸತತ ಎರಡು ಗಂಟೆಯಿಂದ ಜೋರಾಗಿ ಸುರಿಯುತ್ತಿರುವ ಮಳೆಗೆ ವಾಹನ ಸವಾರರು ಪರದಾಡುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರಿಗೆ ಮಳೆರಾಯ ಅಡ್ಡಿಯಾಗಿದ್ದಾನೆ.
ಮಾನ್ಸೂನ್ ಆಗಮನ ತಡವಾದರೂ ಮಂಗಳೂರು ಸುತ್ತಮುತ್ತ ಮಳೆ ಅಬ್ಬರಿಸುತ್ತಿದ್ದು, ರಸ್ತೆಗಳೆಲ್ಲವೂ ಕೆರೆಯಂತೆ ಭಾಸವಾಗುತ್ತಿದೆ. ಧಾರಾಕಾರ ಮಳೆಗೆ ಮಂಗಳೂರು ಕಗ್ಗತ್ತಲಾಗಿದೆ.
ಭಾರಿ ಮಳೆಯ ಎಚ್ಚರಿಕೆ
ಕರ್ನಾಟಕದ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಮಲೆನಾಡಿನಲ್ಲಿ ಚದುರಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಜೂ.27, 28ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀನಿಂದ 55 ಕಿ.ಮೀ ವೇಗದಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ದಾವಣಗೆರೆಯಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಭಾಗವಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ವರುಣ ಗುಡುಗಲಿದ್ದಾನೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ