ಬೆಂಗಳೂರು: ಬೆಂಗಳೂರಿನಲ್ಲಿ ಇಷ್ಟೊಂದು ಮಳೆ ಅವಾಂತರ ನಡೆದಿದೆ. ಆದರೆ, ರಾಜಧಾನಿಯನ್ನು ಪ್ರತಿನಿಧಿಸುವ ಏಳು ಸಚಿವರು ಮಾತ್ರ ಬಿಲ ಸೇರಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಟ್ವೀಟ್ ಮೂಲಕ ವ್ಯಂಗ್ಯ ಮಾಡಿರುವ ಕಾಂಗ್ರೆಸ್, ʻʻಬೆಂಗಳೂರಿನ ನಗರವನ್ನು ಪ್ರತಿನಿಧಿಸುವ 7 ಸಚಿವರು
ಜಟ್ಕಾ ಕಟ್, ಹಲಾಲ್ ಕಟ್ ವಿಚಾರ ಮಾತಾಡಲು ಓಡೋಡಿ ಬರ್ತಾರೆ. ಸಾವರ್ಕರ್ ವಿಚಾರ ಮಾತಾಡಲು ಮುನ್ನುಗ್ಗುತ್ತಾರೆ. ಆದರೆ ಬೆಂಗಳೂರು ಮಳೆ ಅವಾಂತರಕ್ಕೆ ಮಾತ್ರ ಬಾಯಿ ಬಿಡದೆ ಬಿಲ ಸೇರಿಕೊಂಡಿದ್ದೇಕೆ? ಬೆಂಗಳೂರಿನ ಬಗ್ಗೆ ಮಾತಾಡಲೂ ಸಹ ಸಚಿವರಿಗೆ 40% ಕಮಿಷನ್ ಕೊಡಬೇಕೆ?ʼʼ ಎಂದು ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಭಾರಿ ಮಳೆಯಿಂದ ಅನಾಹುತಗಳು ಉಂಟಾಗಿದ್ದು, ಜನರೂ ಸಿಟ್ಟಿಗೆದ್ದಿದ್ದಾರೆ. ಇದೇ ಪರಿಸ್ಥಿತಿಯನ್ನು ಬಳಸಿಕೊಂಡು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ಕುಂಭಕರ್ಣರು ಎಂದ ಸುರ್ಜೇವಾಲಾ
ಇನ್ನೊಂದು ಕಡೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕೂಡಾ ಸರಕಾರ ಹಾಗೂ ಬಿಜೆಪಿ ಮೇಲೆ ಮಳೆ ಮುಂದಿಟ್ಟುಕೊಂಡು ಚಾಟಿ ಬೀಸಿದ್ದಾರೆ.
ʻʻBJPಯ ಅಸಮರ್ಥ ಆಡಳಿತದ ಪರಿಣಾಮ ಸುರಿಯುತ್ತಿರುವ ಮಳೆಗೆ ಇಡೀ ಬೆಂಗಳೂರು ಅವ್ಯವಸ್ಥೆಯ ಆಗರವಾಗಿದೆ. ಮೂಲಸೌಕರ್ಯಗಳ ಕೊರತೆಯಿಂದ ಬೆಂಗಳೂರು ಅಕ್ಷರಶಃ ನಲುಗಿಹೋಗಿದೆ. BJP ದ್ವೇಷ ಮತ್ತು ಹಿಂಸೆ ರಾಜಕಾರಣ ಬಿಟ್ಟು ಮೂಲಸೌಕರ್ಯಗಳ ಕಡೆ ಗಮನ ನೀಡಬೇಕು. ಇನ್ನಾದರೂ BJP ಸರ್ಕಾರ ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಂಡು ಜನತೆಯ ಕಷ್ಟಕ್ಕೆ ಸ್ಪಂದಿಸುವರೇ?ʼʼ ಎಂದು ಟ್ವೀಟ್ ಮಾಡಿದ್ದಾರೆ.
ಮಳೆ ಸಹಜ, ಎದುರಿಸುವುದು ಮುಖ್ಯ ಎಂದ ರೆಡ್ಡಿ
ʻʻಭಾನುವಾರ ಅತಿ ಹೆಚ್ಚು ಮಳೆ ಬಂದಿದೆ ಎನ್ನುವುದು ನಿಜ. ೧೪೮ ಮಿ.ಮೀ. ಮಳೆ ಯಾಗಿದೆ. ಮಳೆ ಬರುವುದು ಪ್ರಕೃತಿ. ಆದರೆ, ನಾವು ಯಾವ ರೀತಿ ಎದುರಿಸುತ್ತೇವೆ. ಎನ್ನುವುದುʼʼ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ʻʻನಾವು ಅಧಿಕಾರದಲ್ಲಿದ್ದಾಗ ಪಕ್ಷಾತೀತವಾಗಿ ಕ್ಷೇತ್ರಗಳ ಅಭಿವೃದ್ಧಿ ಹಣ ಕೊಟ್ಟಿದ್ದೆವು. ಎಲ್ಲಾ ರಾಜ ಕಾಲುವೆಗಳಿಗೆ ತಡೆಗೋಡೆ ಕಟ್ಟಿದ್ದೆವುʼʼ ಎಂದಿರುವ ರೆಡ್ಡಿ ಅವರು, ಮಳೆ ಮತ್ತು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮಿಲಿಟರಿ ತರ ಈ ಸಂದರ್ಭದಲ್ಲಿ ಕೆಲಸ ಮಾಡಬೇಕು. ಆದರೆ, ಇಲ್ಲಿ ಮಂತ್ರಿಗಳಲ್ಲಿ ಹೊಂದಾಣಿಕೆ ಇಲ್ಲ. ಅವರವರು ಅವರವರ ಕ್ಷೇತ್ರ ಬಿಟ್ಟು ಹೊರಗೆ ಬರುವುದಿಲ್ಲ. ಸಿಎಂ ಅವರೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸಿದ್ದೇವೆʼʼ ಎಂದರು ರಾಮಲಿಂಗಾ ರೆಡ್ಡಿ.
ʻʻಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ಮಾಡುವುದು ತಪ್ಪಲ್ಲ. ಆದರೆ ಭೇಟಿ ಬಳಿಕ ಫಾಲೋ ಅಪ್ ಇರಬೇಕು. ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಸರ್ಕಾರ ಮಾಡಬೇಕು. ಸಿಎಂ ಒಂದು ವರ್ಷದ ಹಿಂದೆಯೇ ಸಾವಿರಾರು ಕೋಟಿ ಘೋಷಣೆ ಮಾಡಿದ್ದರು. ಆದರೆ ಇನ್ನೂ ಟೆಂಡರ್ ಆಗಿಲ್ಲ. ಈಗೀಗ ಟೆಂಡರ್ ಕರೆಯುತ್ತಿದ್ದಾರೆʼʼ ಎಂದರು ರೆಡ್ಡಿ.
ಇದನ್ನೂ ಓದಿ| Bengaluru Rain | ಮುಳುಗಡೆಯಾದ ಬೆಂಗಳೂರು: ದೇಶದ ರಾಜಧಾನಿವರೆಗೂ ಚರ್ಚೆ