Site icon Vistara News

Rain News: ಸಿಡಿಲಿಗೆ ಸುಟ್ಟು ಕರಕಲಾದ ಬಾಳೆತೋಟ; ಮರ ಬಿದ್ದು ಹೋಟೆಲ್‌ ಧ್ವಂಸ

Rain news

Rain news

ಬೆಂಗಳೂರು: ರಾಜ್ಯದಲ್ಲಿ ಮಳೆ ಅನಾಹುತ (Rain Effect) ಮುಂದುವರಿದಿದೆ. ಚಿಕ್ಕಬಳ್ಳಾಪುರ, ಬೆಳಗಾವಿ, ಕೊಪ್ಪಳ ಸೇರಿದಂತೆ ಚಿತ್ರದುರ್ಗದಲ್ಲಿ ಮಳೆಗೆ (Rain News) ಜನರು ನಲುಗಿ ಹೋಗಿದ್ದಾರೆ. ಗಾಳಿ ಸಹಿತ ಆಲಿಕಲ್ಲು ಮಳೆಯಾಗುತ್ತಿದೆ. ಪರಿಣಾಮ ಬೆಳೆದ ಬೆಳೆಗಳು ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಮತ್ತೊಂದು ಕಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿತ್ತಿದ್ದು ಜನರು ಭೀತಿಯಲ್ಲೇ ಓಡಾಡುವಂತಾಗಿದೆ.

ಹಾರಿ ಹೋದ ತಗಡಿನ ಶೀಟ್‌

ಗಾಳಿ ಸಹಿತ ಮಳೆಗೆ ಹಾರಿ ಹೋದ ಮನೆಯ ಛಾವಣಿ

ಬೆಳಗಾವಿ ನಗರ ಸೇರಿ ತಾಲೂಕಿನ ವಿವಿಧೆಡೆ ತಡರಾತ್ರಿ ಧಾರಾಕಾರ ಮಳೆಯಾಗಿದ್ದು, ಭೂತರಾಮನಹಟ್ಟಿ ಗ್ರಾಮದಲ್ಲಿ ಗಾಳಿ ಸಹಿತ ಮಳೆಗೆ ಮನೆಯ ಮೇಲ್ಛಾವಣಿಯ ತಗಡಿನ ಶೀಟ್‌ ಹಾರಿಹೋಗಿದೆ. ಹಾರಿ ವಿದ್ಯುತ್ ಕಂಬದ ತಂತಿಯ ಮೇಲೆ ಬಿದ್ದಿದೆ. ಮಾರುತಿ ಬಾಳಪ್ಪ ಪಾಟೀಲ್ ಎಂಬುವರಿಗೆ ಮನೆ ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳೀಯರೇ ಸ್ಥಳಾಂತರಿಸಿದ್ದಾರೆ. ತಗಡಿನ ಶೀಟ್‌ ಹಾರಿ ಹೋದ ಪರಿಣಾಮ ಮನೆಯಲ್ಲಿದ್ದ ಬಹುತೇಕ ವಸ್ತುಗಳು ನೀರಿನಲ್ಲಿ ಜಲಾವೃತವಾಗಿದೆ.

ಸಿಡಿಲಿಗೆ ಬಾಳೆ ತೋಟ ನಷ್ಟ, ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಸಿಡಿಲಿಗೆ ಒಂದು ಎಕರೆ ಬಾಳೆ ಬೆಳೆ ನಾಶ

ಕೊಪ್ಪಳದ ಕನಕಗಿರಿ ತಾಲೂಕಿನ ಸೋಮಸಾಗರದಲ್ಲಿ ಸಿಡಿಲಿನ ಹೊಡೆತಕ್ಕೆ ಒಂದು ಎಕರೆ ಬಾಳೆಗೆ ಬೆಂಕಿ ತಗುಲಿದೆ. ಗ್ರಾಮದ ಶರಣಪ್ಪ ನೆಲಜೇರಿ ಎಂಬುವವರಿಗೆ ಸೇರಿದ ಬಾಳೆ ತೋಟ ಸುಟ್ಟು ಕರಕಲಾಗಿದೆ. ನಾಲ್ಕು ಎಕರೆಯಲ್ಲಿ ಬಾಳೆ ಹಾಕಲಾಗಿತ್ತು, ಅದರಲ್ಲಿ ಒಂದು ಎಕರೆ ಪೂರ್ತಿ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

1 ಎಕರೆ ಬಾಳೆ ತೋಟ ನಾಶ

ಆಲಿಕಲ್ಲು ಮಳೆಗೆ ನೆಲಕ್ಕುರುಳಿದ ಬಾಳೆ ತೋಟ

ಚಿತ್ರದುರ್ಗ ಜಿಲ್ಲೆಯಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆಗೆ ನಾಲ್ಕು ಎಕರೆ ಬಾಳೆ ತೋಟವು ನೆಲಕ್ಕುರುಳಿದೆ. ಫಸಲಿಗೆ ಬಂದ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಚಳ್ಳಕೆರೆ ತಾಲೂಕಿನ ಜಡೆಕುಂಟೆ ಗ್ರಾಮದಲ್ಲಿ ಮಹಾಂತೇಶ್ ಎಂಬುವವರಿಗೆ ಸೇರಿದ ಬಾಳೆ ತೋಟ ಹಾಳಾಗಿದೆ.

ನೆಲಸಮವಾದ ಬಾಳೆಗೂನೆಗಳು

ಮಹಾಂತೇಶ್‌ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೃಷಿ ಆಸಕ್ತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾಳೆ, ಅಡಿಕೆ ಹಾಕಿದ್ದರು. ಕೊಯ್ಲಿಗೆ ಬಂದಿದ್ದ ಬಾಳೆ ಗೊನೆಗಳು, ಮಳೆ ಗಾಳಿ ರಭಸಕ್ಕೆ ನೆಲಸಮ ಆಗಿವೆ.

ಬುಡಸಮೇತ ಹೋಟೆಲ್‌ ಮೇಲೆ ಬಿದ್ದ ಮರ

ಹೋಟೆಲ್‌ ಮೇಲೆ ಉರುಳಿದ ಬೃಹತ್‌ ಮರ

ಬೆಳಗಾವಿಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ಭಾರಿ ಬಿರುಗಾಳಿ ಮಳೆಗೆ ಹೋಟೆಲ್‌ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಆನಂದ ಪಾಟೀಲ ಎಂಬುವರಿಗೆ ಸೇರಿದ ಹೋಟೆಲ್‌ನಲ್ಲಿ ಫ್ರಿಜ್ಡ್‌ ಸೇರಿದಂತೆ ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

ತುಮಕೂರಲ್ಲಿ ಗುಡುಗು, ಬಿರುಗಾಳಿ ಸಹಿತ ವರ್ಷಧಾರೆ ಆಗಿದ್ದು, ಸಿಡಿಲಿನ ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಪಾವಗಡ ತಾಲೂಕಿನ ಗಂಗಸಾಗರದಲ್ಲಿ ನರಸಿಂಹಮೂರ್ತಿ ಎಂಬುವವರ ಮನೆಯ ಮುಂದಿದ್ದ, ತೆಂಗಿನ ಮರ ಧಗಧಗನೆ ಹೊತ್ತಿ ಉರಿದಿದೆ. ಬಿರುಗಾಳಿಯ ರಭಸಕ್ಕೆ ಮನೆಯ ಚಾವಣಿ ಕುಸಿದು, ಟಿ.ವಿ, ಫ್ರಿಡ್ಜ್‌, ಫ್ಯಾನ್‌ ಎಲ್ಲವೂ ಹಾನಿಯಾಗಿದೆ.

ಫ್ಯಾನ್‌ ರಿಪೇರಿ ಮಾಡುತ್ತಿರುವುದು

ಇದನ್ನೂ ಓದಿ: Weather Report: ಮುಂದಿನ 3 ಗಂಟೆಯಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ; ಇರಲಿ ಸ್ವಲ್ಪ ಎಚ್ಚರ

ಮಳೆಗೆ ಬೆಳೆ ಹಾನಿ ರೈತರು ಕಂಗಾಲು

ಚಿಕ್ಕಬಳ್ಳಾಪುರದಲ್ಲಿ ಸುರಿದ ಅಕಾಲಿಕ ಮಳೆಗೆ ಬೆಳೆ ಹಾನಿಯಾಗಿದೆ. 8.34 ಎಕರೆ ಕೃಷಿ ಬೆಳೆ, 103 ತೋಟಗಾರಿಕಾ ಬೆಳೆ, 43 ಎಕರೆ ರೇಷ್ಮೆ‌ ಬೆಳೆ ನಾಶವಾಗಿದ್ದು, ಒಟ್ಟು 154 .34 ಎಕರೆ ಬೆಳೆ ನಷ್ಟವಾಗಿದೆ. ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಹಾಗೂ ಅಧಿಕಾರಿಗಳ ಜಂಟಿ ಸಮೀಕ್ಷೆ ನಡೆಸಿದ್ದಾರೆ. ಬೆಳೆ ನಷ್ಟ ಪರಿಹಾರ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ರವಿಕುಮಾರ್‌ ಭರವಸೆ ನೀಡಿದ್ದಾರೆ. ಕೇತೆನಹಳ್ಳಿ, ಗೊಲ್ಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆದಿದ್ದ ಚೆಂಡು ಹೂ , ಬಟನ್ ಹೂ, ಬೀನ್ಸ್ ತೋಟಗಳು ಮಣ್ಣುಪಾಲಾಗಿವೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version