ಬೆಳಗಾವಿ: ಜೂನ್ ತಿಂಗಳು ಮುಗಿಯಿತು. ಇನ್ನೆರಡು ದಿನದಲ್ಲಿ ಜುಲೈ ಆರಂಭವಾಗುತ್ತಲಿದೆ. ಆದರೆ, ವರುಣ ದೇವ ಮಾತ್ರ ಮುನಿಸಿಕೊಂಡಿದ್ದಾನೆ. ಮೋಡವಾಗುತ್ತದೆ, ಒಂದೆರಡು ಹನಿ ಬೀಳುತ್ತದೆ, ಮತ್ತೆ ಮಳೆ (Rain News) ಮರೆಯಾಗುತ್ತದೆ. ಇನ್ನು ಕೆಲವು ಕಡೆ ಆ ಹನಿಗಳೂ ಕಾಣಿಸದು. ಪರಿಸ್ಥಿತಿ ಹೀಗೇ ಆದರೆ ಮುಂದಿನ ಕಥೆ ಏನು? ಕೃಷಿ ಮಾಡುವುದೆಂತು? ಜೀವನ ಸಾಗಿಸುವುದೆಂತು? ಅಂತರ್ಜಲದ ಕಥೆ ಎಂತು? ಇದರ ಜತೆ ಸಹಸ್ರ, ಸಹಸ್ರ ಆಲೋಚನೆಗಳು, ಜೀವನ ನಿರ್ವಹಣೆಯ ಕಷ್ಟಗಳು. ಇಂಥ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಕತ್ತೆಗಳಿಗೆ ಮದುವೆ ಮಾಡಿದ್ದಾರೆ. ಅದೂ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ವರುಣನಿಗೆ ಮೊರೆ ಇಟ್ಟಿದ್ದಾರೆ.
ವರುಣ ದೇವನೇ ಮಳೆ ಕರುಣಿಸು ಎಂದು ಬೇಡಿಕೊಂಡಿರುವ ಲಕ್ಷ್ಮೇಶ್ವರ ಗ್ರಾಮದ ಜನತೆ, ಎಲ್ಲರೂ ಸೇರಿಕೊಂಡು ಸಾವಿರಾರು ರೂಪಾಯಿ ದುಡ್ಡು ಹಾಕಿ, ಲಕ್ಷಗಟ್ಟಲೇ ಹಣ ಸಂಗ್ರಹಿಸಿ ಅದ್ಧೂರಿಯಾಗಿ ಕತ್ತೆಗಳಿಗೆ ಮದುವೆ ಮಾಡಿದ್ದಾರೆ.
ಗಂಡು ಕತ್ತೆ ಹಾಗೂ ಹೆಣ್ಣು ಕತ್ತೆಯನ್ನು ಆಯ್ಕೆ ಮಾಡಿ ವಧು – ವರರಂತೆ ಸಿಂಗರಿಸಿದರು. ಅದಕ್ಕೆ ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರನ್ನು ಪ್ರತ್ಯೇಕವಾಗಿ ಮಾಡಿಕೊಂಡರು. ಮದುವೆ ಮಾತುಕತೆ ನಡೆಸಿ ನಿಶ್ಚಯ ಮಾಡಿಕೊಂಡರು. ಒಂದೊಳ್ಳೆ ಮುಹೂರ್ತವನ್ನೂ ನೋಡಿದರು. ಮದುವೆಗೆ ಸಿದ್ಧತೆ ಮಾಡಿದರು.
ಇದನ್ನೂ ಓದಿ: Video Viral : ಅಸುನೀಗಿತು ಪ್ರೀತಿಯ ಹಸು; ಅಳುತ್ತಲೇ ಹಾಲು-ತುಪ್ಪ ಬಿಟ್ಟ ರೈತ, ಊರಿಗೆಲ್ಲ ಊಟ ಹಾಕಿದ!
ಮೆರವಣಿಗೆ ಸಾಗಿದರು, ಬಾಜಾ ಭಜಂತ್ರಿ ಬಾರಿಸಿದರು
ಕೊನೆಗೆ ನಿಶ್ಚಯವಾದ ಈ ದಿನ ಮೆರವಣಿಗೆ ಸಾಗಿದರು, ಬಾಜಾ ಭಜಂತ್ರಿ ಬಾರಿಸಿದರು. ಮದುವೆ ಮಂಟಪವನ್ನೂ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದರು. ಮುತೈದೆಯರು ಸೋಬಾನ ಪದ ಹಾಡಿ ಕತ್ತೆಗಳ ಮದುವೆ ಮಾಡಿಸಿದರು. ಶಾಸ್ತ್ರೋಕ್ತವಾಗಿ ಮದುವೆ ಮಾಡಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ, ವೇದಿಕೆ ನಿರ್ಮಿಸಿ ಊರಿಗೆ ಊಟ ಹಾಕಿ ಸಂಭ್ರಮಿಸಿದರು.