ಬೆಳಗಾವಿ/ಚಿಕ್ಕಮಗಳೂರು: ರಾಜ್ಯಾದ್ಯಂತ ಮಳೆ (Rain News) ಅಬ್ಬರ ಮುಂದುವರಿದಿದ್ದು, ಜನ-ಜೀವನ ದಿನೇದಿನೆ ದುಸ್ತರವಾಗುತ್ತಿದೆ. ಮಳೆಯಿಂದ ನಷ್ಟದ ಪ್ರಮಾಣವು ಸಹ ಹೆಚ್ಚುತ್ತ ಸಾಗಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮನೆಗಳು ಕುಸಿಯುತ್ತಿವೆ. ಜನರ ಬದುಕೂ ಸಹ ಮೂರಾಬಟ್ಟೆಯಾಗುತ್ತಿವೆ.
ಈ ಹಿಂದೆ ಕೊಡಗಿನಲ್ಲಿ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿತ್ತು. ಹೀಗಾಗಿ ಜೂನ್ ಮೊದಲ ವಾರದಲ್ಲಿ ಕೊಡಗಿಗೆ ಎನ್‌ಡಿಆರ್‌ಎಫ್ ತಂಡ (NDRF) ಭೇಟಿ ನೀಡುತ್ತಿದೆ. ವಿಜಯಪುರದಲ್ಲೂ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.
ರಣ ಗಾಳಿ ಮಳೆಗೆ ಹಾರಿಹೋದ ಛಾವಣಿ
ಸೋಮವಾರ (ಮೇ 22) ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಮನೆಗಳ ಛಾವಣಿ ಹಾರಿ ಹೋಗಿವೆ. ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮನೆಗಳ ಛಾವಣಿ ಹಾರಿ ಹೋಗಿದೆ. ಗ್ರಾಮದ ಶೋಭಾ ನರೂಟೆ ಎಂಬುವವರು ಮನೆಗೂ ಹಾನಿಯಾಗಿದ್ದು, ರಾತ್ರಿಯಿಡೀ ಮಳೆಯಲ್ಲಿ ಸಿಲುಕಿ ಪರದಾಡಿದರು. ಮನೆಯ ಮೇಲಿನ ಛಾವಣಿ ಹಾರಿದ ಪರಿಣಾಮ ದವಸ, ಧಾನ್ಯಗಳು ನೀರುಪಾಲಾಗಿದ್ದವು. ರಾತ್ರಿಯಿಡಿ ಮಳೆಯಲ್ಲೇ ಜಾಗರಣೆ ಮಾಡುವಂತಾಯಿತು. ಕೆಲವು ಕೆಡೆ ಮರಗಳು ಧರೆಗುರುಳಿದ್ದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಯಿತು.
ಕಾರಿನ ಮೇಲೆ ಬಿದ್ದ ಮರ
ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಜಖಂಗೊಂಡಿದೆ. ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದಲ್ಲಿ ಕಟ್ಟಡ ಗುತ್ತಿಗೆದಾರ ಪ್ರದೀಪ್ ಎಂಬುವವರು, ತೋಟಕ್ಕೆ ಜನರನ್ನು ಕರೆದುಕೊಂಡು ಹೋಗಲು ಓಮ್ನಿ ಕಾರನ್ನು ಬಳಸುತ್ತಿದ್ದರು.
ಮಧ್ಯಾಹ್ನ ಊಟಕ್ಕೆ ಬಂದಿದ್ದರಿಂದ ಕಾರಿನಲ್ಲಿ ಯಾರೂ ಇರಲಿಲ್ಲ. ಕಾರಿನಲ್ಲಿ ಜನ ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಕಾರಿನ ಮೇಲೆ ಮರ ಬಿದ್ದಿದ್ದರಿಂದ ಶೃಂಗೇರಿ-ಚಿಕ್ಕಮಗಳೂರು ರಸ್ತೆ ಕೆಲ ಬಂದ್ ಆಗಿತ್ತು.
ಕಾಫಿನಾಡಲ್ಲಿ ಅಬ್ಬರಿಸುತ್ತಿರುವ ವರುಣ
ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆಗೆ ಮಲೆನಾಡು ಜನರು ಕಂಗಾಲಾಗಿದ್ದಾರೆ. ಮಂಗಳವಾರ ಕಳಸ, ಶೃಂಗೇರಿ, ಕೊಪ್ಪ, ಜಯಪುರ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಇತ್ತ ಕೊಡಗಿನ ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆಯಲ್ಲೂ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಕೊಡಗಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಮುಂದಿನ 5 ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿಂದೆ ಕೊಡಗಿನಲ್ಲಿ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿತ್ತು. ಹೀಗಾಗಿ ಜೂನ್ ಮೊದಲ ವಾರದಲ್ಲಿ ಕೊಡಗಿಗೆ ಎನ್‌ಡಿಆರ್‌ಎಫ್ ತಂಡ ( NDRF) ಭೇಟಿ ನೀಡುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Rain News: ಸಿಡಿಲಿಗೆ ಸುಟ್ಟು ಕರಕಲಾದ ಬಾಳೆತೋಟ; ಮರ ಬಿದ್ದು ಹೋಟೆಲ್ ಧ್ವಂಸ
ಆಲಿಕಲ್ಲು ಹೊಡೆತಕ್ಕೆ ದಾಳಿಂಬೆ ಹಣ್ಣಿಗೆ ಕಲೆಗಳು
ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ದಾಳಿಂಬೆ ಬೆಳೆಗಾರರ ಗೋಳಾಟ ಹೇಳತೀರದು. ಆಲಿಕಲ್ಲು ಹೊಡೆತಕ್ಕೆ ದಾಳಿಂಬೆ ಹಣ್ಣಿಗೆ ಕಲೆಗಳಾಗಿ ಕೊಳೆತು ಹಾಳಾಗುತ್ತಿವೆ. ಗ್ರಾಮದ ಗೋವಿಂದಕೊಪ್ಪ ವ್ಯಾಪ್ತಿಯ ಬಾಪುರಾವ್ ಚೌಹಾಣ್ ಎಂಬುವರ ಮೂರುವರೆ ಎಕರೆ ದಾಳಿಂಬೆ ಬೆಳೆಗಳು ನಾಶವಾಗಿವೆ. ಮೂರೂವರೆ ಎಕರೆಗೆ ಆರೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಇನ್ನೆರಡು ತಿಂಗಳಲ್ಲಿ ಫಸಲಿಗೆ ಬರುತ್ತಿತ್ತು ಎನ್ನಲಾಗಿದೆ. ಈ ದಾಳಿಂಬೆ ಗಿಡವು ಬೆಳೆ ಸಹಿತ ಗಾಳಿಗೆ ಮುರಿದು ನೆಲಕ್ಕೆ ವಾಲಿದೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ