ಮಂಗಳೂರು/ ಉಡುಪಿ/ ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆ ಅವಘಡ (Rain Damage) ಶುರುವಾಗಿದ್ದು, ವರುಣಾರ್ಭಟಕ್ಕೆ (Rain News) ಎಲ್ಲರೂ ಗಡಗಡ ನಡುಗುವಂತಾಗಿದೆ. ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮಂಗಳೂರು ಹೊರವಲಯದ ತಲಪಾಡಿಯ ಶಾರದಾ ಕಾಲೇಜಿನಲ್ಲಿ ಗಾಳಿ ಮಳೆಗೆ ಬೃಹತ್ ಚಾವಣಿಯೇ ಹಾರಿ ಬಿದ್ದಿದೆ.
ಕ್ಯಾಂಪಸ್ ಒಳಗಿನ ಆರು ಅಂತಸ್ತಿನ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಭಾರಿ ಗಾತ್ರದ ಕಬ್ಬಿಣದ ಸಲಾಕೆಯೊಂದಿಗೆ ಶೀಟ್ ಚಾವಣಿ ಅಳವಡಿಸಲಾಗಿತ್ತು. ಆದರೆ ಬಿರುಗಾಳಿ ಸಹಿತ ಮಳೆಗೆ ಸಲಾಕೆ ಸಮೇತ ಶೀಟ್ ನೆಲಕ್ಕೆ ಅಪ್ಪಳಿಸಿದೆ. ಮಳೆ ಕಾರಣಕ್ಕೆ ಮಕ್ಕಳಿಗೆ ರಜೆ ನೀಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಇನ್ನು ಕೆಳಗೆ ಕುಸಿದ ಸಲಾಕೆಯಿಂದಾಗಿ ಹಲವು ವಾಹನಗಳು ಜಖಂಗೊಂಡಿವೆ.
ಸೇತುವೆಗಳು ಮುಳುಗಡೆ ಜನ ಸಂಪರ್ಕ ಕಡಿತ
ಕರಾವಳಿಯಾದ್ಯಂತ ಭಾರಿ ಮಳೆ ಹಿನ್ನೆಲೆ ಪುತ್ತೂರು ತಾಲೂಕಿನ ಚೇಳ್ಯಡ್ಕ ಸೇತುವೆ ಜಲಾವೃತಗೊಂಡಿದೆ. ಪುತ್ತೂರು- ಪಾಣಾಜೆ- ಪೆರ್ಲಗೆ ಸಂಪರ್ಕಿಸುವ ರಸ್ತೆ ಇದಾಗಿದೆ. ಮಳೆಗಾಲ ಸಂದರ್ಭದಲ್ಲಿ ಪ್ರತಿ ಬಾರಿ ಸೇತುವೆ ಮುಳುಗಡೆ ಆಗುತ್ತದೆ. ಸದ್ಯ ಸೇತುವೆ ಮುಳುಗಡೆ ಹಿನ್ನೆಲೆ ವಾಹನ ಸಂಚಾರವನ್ನು ನಿಷೇಧ ಮಾಡಲಾಗಿದೆ. ಕಾಸರಗೋಡು ಸೇರಿದಂತೆ ಹಲವು ಗ್ರಾಮದ ಸಂಪರ್ಕ ಸೇತುವೆ ಆಗಿತ್ತು, ಸದ್ಯ ಜನರು ಪರ್ಯಾಯ ರಸ್ತೆ ಬಳಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇತ್ತ ಕಾರವಾರ ತಾಲೂಕಿನ ಬಿಣಗಾ ಗ್ರಾಮದಲ್ಲೂ ಸೇತುವೆ ಮುಳುಗಡೆ ಆಗಿದೆ. ಬಿಣಗಾ ಗ್ರಾಮದ ಮೂಡಲಮಕ್ಕಿ ಪ್ರದೇಶಕ್ಕೆ ತೆರಳುವ ಸೇತುವೆ ಇದಾಗಿದೆ. ಸದ್ಯ ಸೇತುವೆ ಮುಳುಗಡೆಯಿಂದಾಗಿ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಬಂದ್ ಆಗಿದೆ. ಸೇತುವೆ ಮೇಲೆಯೇ ನೀರು ಉಕ್ಕಿ ಹರಿಯುತ್ತಿದೆ. ಬಿಣಗಾ ಗ್ರಾಮದ ವಕ್ಕಲಕೇರಿ ಪ್ರದೇಶವೂ ಮುಳುಗಡೆ ಆಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮನೆಯಿಂದ ಹೊರಗೆ ಬರಲು ಆಗದೆ ಜನರು ಆತಂಕಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಶಾಂಭವಿ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಮೂಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಪ್ರದೇಶ ಜಲಾವೃತಗೊಂಡಿದೆ. ನೂರಕ್ಕೂ ಹೆಚ್ಚು ಮನೆಗಳಿಗೆ ಜಲ ದಿಗ್ಬಂಧನ ಹಾಕಲಾಗಿದೆ. ತೆಂಗಿನ ತೋಟಗಳು ಕೆರೆಯಂತಾಗಿದ್ದು, ಮನೆಯಿಂದ ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ನೆರೆ ನೀರು ನಿಂತು ಮನೆಗಳು ಕುಸಿಯುವ ಭೀತಿ ಹೆಚ್ಚಾಗಿದ್ದು, ಜನರ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ.
ಮಂಗಳೂರು ಹೊರವಲಯ ತೋಕೂರಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಲೈಟ್ ಹೌಸ್ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ನಿನ್ನೆ ಸಂಜೆಯಿಂದ ಜಲಾವೃತಗೊಂಡಿದೆ. ಲೈಟ್ ಹೌಸ್ ನಿಂದ ಸುಬ್ರಮಣ್ಯ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯಾಗಿದೆ.
ಉತ್ತರ ಕನ್ನಡದ ಭಟ್ಕಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಕಾರವಾರ, ಮಂಗಳೂರು ನಡುವಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ನದಿಯಂತಾಗಿದೆ. ಹೆದ್ದಾರಿ ಪಕ್ಕದ ಅಂಗಡಿಗಳಿಗೆ ನೀರು ನುಗ್ಗುವ ಆತಂಕ ಇದೆ.
ಮಳೆಗಾಲದ ಅಬ್ಬರ ಶುರುವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ವಿವಿಧ ಪ್ರಾಕೃತಿಕ ಅನಾಹುತಗಳಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇದೀಗ ನೆರೆಯ ಕೇರಳದ ಸಮೀಪವಿರುವ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸುವ ಕಲ್ಲಪಳ್ಳಿಯಲ್ಲಿ ಗುಡ್ಡದಿಂದ ಮಣ್ಣು ರಸ್ತೆಗೆ ಕುಸಿದಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಸ್ಥಳೀಯರು ಸೇರಿ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಇನ್ನೂ ಮಳೆ ಮುಂದುವರಿದರೆ ಗುಡ್ಡ ಇನ್ನಷ್ಟು ಕುಸಿಯುವ ಅಪಾಯ ಎದುರಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸಬೇಕು ಎಂದು ತಿಳಿಸಲಾಗಿದೆ.
ಅದೇ ತರಹ ಕುಂಟುಕಾಡು ಮುತ್ತುಕೋಡಿ ಮಾವಿನಕಟ್ಟೆ ರಸ್ತೆಯಲ್ಲಿ ಬರೆಯೊಂದು ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ಸಂಪೂರ್ಣ ರಸ್ತೆ ಬಂದ್ ಆಗಿದ್ದು ಮಾವಿನಕಟ್ಟೆ – ಮಂಡೆಕೋಲು ಸಂಪರ್ಕ ಕಡಿತಗೊಂಡಿದೆ ಎಂದು ವರದಿಯಾಗಿದೆ.
ಮಳೆ ಆರ್ಭಟಕ್ಕೆ ಮನೆಯ ಮುಂದಿನ ಧರೆ ಕುಸಿತ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯು ನಾನಾ ಅವಾಂತರವನ್ನು ಸೃಷ್ಟಿ ಮಾಡಿದೆ. ಮಳೆ ಆರ್ಭಟಕ್ಕೆ ಮನೆಯ ಮುಂದಿನ ಧರೆ ಕುಸಿದಿದೆ. ಶೃಂಗೇರಿ ತಾಲೂಕಿನ ಮೆಗಲು ಬೈಲು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಆರು ಮನೆಗಳಿಗೆ ಇನ್ನಷ್ಟು ಧರೆ ಕುಸಿಯುವ ಭೀತಿ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಯು ಉತ್ತಮೇಶ್ವರ ರಸ್ತೆ ಕಾಮಗಾರಿಗಾಗಿ ಮಣ್ಣು ತೆಗೆಯಲಾಗಿತ್ತು. ಇದೆ ರಸ್ತೆಯ ಮತ್ತೊಂದು ಕಡೆ ಭೂಮಿ ಕುಸಿದಿದೆ. ಸ್ಥಳಕ್ಕೆ ಶೃಂಗೇರಿ ತಹಸೀಲ್ದಾರ್ ಗೌರಮ್ಮ ಹಾಗೂ ಆರ್.ಐ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Rain News: ಕರಾವಳಿ, ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ, ಶಾಲೆಗಳಿಗೆ ಇಂದೂ ರಜೆ
ಉಡುಪಿ ಶ್ರೀಕೃಷ್ಣ ಮಠದಲ್ಲಿ ನೆರೆ ಪರಿಸ್ಥಿತಿ
ಉಡುಪಿಯಲ್ಲೂ ಭಾರಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಉಡುಪಿಯ ಶ್ರೀಕೃಷ್ಣ ಮಠದ ಬಳಿ ನೆರೆಗೆ ಜನರು ಕಂಗಾಲಾಗಿದ್ದಾರೆ. ಮಠಕ್ಕೆ ಬಂದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದರು. ನಿನ್ನೆ ಬುಧವಾರ ಕೃಷ್ಣ ಮಠದ ಪಾರ್ಕಿಂಗ್ ಜಾಗದಲ್ಲಿ ನೀರು ತುಂಬಿತ್ತು. ಇದೀಗ ಮಠದ ರಾಜಾಂಗಣದಲ್ಲೂ ಕೆರೆಯಂತಾಗಿದೆ. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಬೋಟ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ