ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಸುತ್ತ ಮುತ್ತ ಧಾರಾಕಾರ ಮಳೆ (Rain News) ಸುರಿಯುತ್ತಿದೆ. ನೆನ್ನೆ ರಾತ್ರಿಯಿಂದಲೂ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಭಾರಿ ಮಳೆಯಿಂದ ಕೊಟ್ಟಿಗೆಹಾರ, ಬಾಳೂರು, ಬಣಕಲ್ ಸೇರಿ ಹಲವೆಡೆ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದೆ. ಇನ್ನು ಬಿರುಸಿನ ಮಳೆಯಿಂದ ಚಾರ್ಮಾಡಿ ಘಾಟ್ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು, ಮಂಗಳೂರು-ಮೂಡಿಗೆರೆ ಪ್ರಯಾಣಿಕರು ಪರದಾಡುವಂತಾಗಿದೆ. ಭಾರಿ ಮಳೆಯಿಂದಾಗಿ ಆಂಬ್ಯುಲೆನ್ಸ್ ಚಾಲಕರಿಗೂ ಸಂಕಷ್ಟ ಎದುರಾಗಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಮಂಜು ಮಿಶ್ರಿತ ಮಳೆಯಿಂದಾಗಿ ರಸ್ತೆ ಕಾಣದೆ ವಾಹನಗಳು ನಿಂತಲ್ಲೇ ನಿಂತಿವೆ.
ವಿರಾಜಪೇಟೆ ತಾಲೂಕಿನಲ್ಲಿ ಕುಸಿದ ಕಾಂಕ್ರೀಟ್ ರಸ್ತೆ
ಕೊಡಗು: ಜಿಲ್ಲೆಯಲ್ಲಿ ಆರಿದ್ರಾ ಮಳೆ ಅಬ್ಬರದಿಂದ ಕಾಂಕ್ರೀಟ್ ರಸ್ತೆಯ ಒಂದು ಬದಿ ಕುಸಿದಿದೆ. ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಪುತ್ತಮಕ್ಕಿ ಸ್ಕೂಲ್ ಸಮೀಪ ನಡೆದ ಘಟನೆ ನಡೆದಿದೆ. ಕಳೆದ ನಾಲ್ಕು ವರ್ಷದ ಹಿಂದೆ ಕಾಮಗಾರಿ ನಡೆದಿತ್ತು. ವಿರಾಜಪೇಟೆ ತೆರ್ಮೆಮೊಟ್ಟೆ ಮೂಲಕ ತೋರಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಕಳೆದ 5 ವರ್ಷದ ಹಿಂದೆ ತೋರದ ಬಳಿ ಭಾರಿ ಕುಸಿತವಾಗಿದ್ದ ಸ್ಥಳದಿಂದ 8 ಕಿ.ಮೀ. ದೂರದಲ್ಲಿ ಘಟನೆ ನಡೆದಿದೆ.
ಮನೆ ಚಾವಣಿ ಕುಸಿದು ಅವಶೇಷಗಳಡಿ ಸಿಲುಕಿದ ನಾಲ್ವರ ರಕ್ಷಣೆ
ಗದಗ: ಮನೆ ಚಾವಣಿ ಕುಸಿದು ಅವಶೇಷಗಳಡಿ ಸಿಲುಕಿದ್ದ ನಾಲ್ವರ ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹತ್ತಿಕಾಳ ಬಡಾವಣೆಯಲ್ಲಿ ನಡೆದಿದೆ.
ನಿರಂತರ ಮಳೆಯಿಂದ ಚಾವಣಿ ಶಿಥಿಲವಾಗಿತ್ತು. ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆ ಏಕಾಏಕಿ ಚಾವಣಿ ಕುಸಿದಿದ್ದರಿಂದ ಗಂಗಪ್ಪ ಹತ್ತಿಕಾಳ, ಚಂಭವ್ವ ಹತ್ತಿಕಾಳ, ಸರೋಜಾ ಹತ್ತಿಕಾಳಗೆ ಗಾಯಗಳಾಗಿವೆ. ಛಾವಣಿ ಕುಸಿತ ಗಮನಿಸಿ ಮನೆಯಿಂದ 16 ವರ್ಷ ಬಾಲಕಿ ಮೇಘಾ ಆಚೆ ಓಡಿ ಬಂದಿದ್ದಾಳೆ.
ಕೂಡಲೇ ಸ್ಥಳೀಯರಿಗೆ ಮೇಘಾ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದು ಮಣ್ಣಿನ ಅಡಿಯಲ್ಲಿ ಸಿಲುಕಿದ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿರುಗಾಳಿ ಮಳೆಗೆ ಮನೆ ಮೇಲೆ ಬಿದ್ದ ಆಲದ ಮರ; ಮನೆಯಲ್ಲಿದ್ದವರು ಪಾರು
ಉಡುಪಿ: ಬಿರುಗಾಳಿ ಸಹಿತ ಭಾರಿ ಮಳೆಗೆ ನಗರದ ವಸಂತಿ ಶೆಟ್ಟಿ ಎಂಬುವವರ ಮನೆ ಮೇಲೆ ಆಲದ ಮರ ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ. ಘಟನೆ ನಡೆದ ವೇಳೆ ವಸಂತಿ ಶೆಟ್ಟಿ, ಮಗಳು, ಮೊಮ್ಮಕ್ಕಳು ಮನೆಯಲ್ಲಿದ್ದರು.
ಇದನ್ನೂ ಓದಿ | Mangalore News: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು
ಮರ ಬಿದ್ದಿದ್ದರಿಂದ ಮನೆಯ ಎರಡು ಕೊಠಡಿಗಳ ಮೇಲ್ಚಾವಣಿ ಕುಸಿದು ಬಿದ್ದಿದೆ. ಮನೆಯ ಸದಸ್ಯರು ಬೇರೆ ಕೋಣೆಯಲ್ಲಿ ಮಲಗಿದ್ದರು, ಇದರಿಂದ ಅಪಾಯ ತಪ್ಪಿದೆ. ಅವಘಡದಿಂದ ಸೈಕಲ್ ಶಾಪ್, ಜನಪ್ರಿಯ ಸೌಂಡ್ಸ್, ಸಲೂನ್‌ಗೆ ಹಾನಿಯಾಗಿದೆ.
ಕರಾವಳಿ ಬೈಪಾಸ್ ಜಲಾವೃತ
ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ಎಲ್ಲೋ ಅಲರ್ಟ್ ನೀಡಲಾಗಿತ್ತು. ಏಕಾಏಕಿ ಸುರಿದ ಗಾಳಿ ಸಹಿತ ಮಳೆಯಿಂದ ನಗರದ ಕರಾವಳಿ ಬೈಪಾಸ್ ಬಳಿ ರಸ್ತೆ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಗಾಳಿ ಸಹಿತ ಮಳೆಗೆ ಹಲವೆಡೆ ಮರಗಳು ನೆಲಕ್ಕುರುಳಿದ್ದು, ಕಡೆಕಾರು ಪರಿಸರದಲ್ಲಿ ಮನೆಯ ಮೇಲೆ ಮರ ಬಿದ್ದಿದೆ.