Site icon Vistara News

Rain News: ಕೊಡಗಿನ ಹಲವೆಡೆ ಮಳೆಯ ಸಿಂಚನ; ಬೃಹತ್‌ ಮರ ಬಿದ್ದು ಮನೆಗೆ ಹಾನಿ

rains lash several parts of Kodagu; Huge tree falls on house, damages house

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಬಿಸಿಲ ತಾಪ ಹೆಚ್ಚಾಗಿ, ನದಿ, ತೊರೆ, ಹಳ್ಳ-ಕೊಳ್ಳಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಇದರಿಂದ ಕಾವೇರಿ ತವರಲ್ಲೇ ಕುಡಿಯುವ ನೀರಿಗೂ ಅಹಾಕಾರ ಎದುರಾಗಿತ್ತು‌. ಬಿಸಿಲ ಬೇಗೆಗೆ ತತ್ತರಿಸಿದ್ದ ಕೊಡಗಿನಲ್ಲಿ ಸೋಮವಾರ ಮಳೆಯ (Rain News) ಸಿಂಚನವಾಗಿದ್ದು, ಕಾದ ನೆಲಕ್ಕೆ ವರುಣ ತಂಪೆರೆದ್ದಾನೆ.

ಕೊಡಗಿನ ನಾಪೋಕ್ಲು ಹಾಗೂ ಕುಶಾಲನಗರ ಸುತ್ತ ಮುತ್ತ ಮಳೆಯಾಗಿದ್ದು, ಇದರಿಂದ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಕುಶಾಲನಗರದ ವಾಲ್ಲೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಜ್ಯೋತಿನಗರದಲ್ಲಿ ಮೊದಲ ವರ್ಷಧಾರೆಗೆ ಪರಮೇಶ ಎಂಬುವವರ ಮನೆಯ ಮೇಲೆ ಬೃಹತ್ ಮರ ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬೀಳುವ ಸಂಧರ್ಭದಲ್ಲಿ ಮನೆಯ ಒಳಗೆ ಪರಮೇಶ, ಆತನ ಮಡದಿ ಸೇರಿದಂತೆ ಮೂವರು ಇದ್ದರು.

ಮರ ಬಿದ್ದ ಪರಿಣಾಮ ಮನೆಯ ಚಾವಣಿಗೆ ಹಾನಿಯಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಅಲ್ಪಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಇದನ್ನೂ ಓದಿ | ದೇವ್ರೇ ಕ್ಷಮಿಸಪ್ಪಾ; ದೇಗುಲದಲ್ಲಿ ಹುಂಡಿ ಹಣ ಕದಿಯೋ ಮೊದಲು ಕೈಮುಗಿದ ಐನಾತಿ ಕಳ್ಳ, ವಿಡಿಯೊ ಇಲ್ಲಿದೆ

ಬೇಸಿಗೆ ಬಿಸಿ ನಡುವೆಯು ಇಲ್ಲೆಲ್ಲ ಮಳೆಯ ಸಿಂಚನ

ಬೆಂಗಳೂರು/ಕೊಡಗು: ಕಾದ ಕಾವಲಿಯಾಗಿದ್ದ ಕಾವೇರಿ ತವರು ಕೊಡಗಿನಲ್ಲಿ ಸೋಮವಾರ ಸಂಜೆ ಮಳೆ ತಂಪೆರೆದಿದೆ. ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ವರ್ಷದ ಮೊದಲ ಮಳೆಯಾಗಿದೆ. ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ಮಳೆಯ ಸಿಂಚನವಾಗಿದೆ. ಇತ್ತ ಮಡಿಕೇರಿ ತಾಲೂಕಿನ ನಾಪೋಕ್ಲು ಭಾಗದಲ್ಲೂ ವರ್ಷಾಧಾರೆಗೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಮಳೆಯಿಲ್ಲದೆ ಕಾಫಿ ಗಿಡಗಳು ಹಾಗೂ ಕಾಳುಮೆಣಸು ಬಳ್ಳಿ ಒಣಗುತ್ತಿದ್ದವು. ಸದ್ಯ ಮಳೆಯಿಂದಾಗಿ ಬೆಳಗಾರರಲ್ಲಿ ಸಂತಸ ಮೂಡಿದೆ.

ಮುಂದಿನ 24 ಗಂಟೆಯಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ (Rain News) ಬಹಳಷ್ಟು ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ದಕ್ಷಿಣ ಒಳನಾಡಿನ ರಾಮನಗರ ಮತ್ತು ಉತ್ತರ ಒಳನಾಡಿನ ಕಲಬುರಗಿಯಲ್ಲಿ ಮಳೆಯಾಗಬಹುದು.

ತಾಪಮಾನದ ಬಿಸಿ

ಕರಾವಳಿಯ ಪಣಂಬೂರು ಹಾಗೂ ಒಳನಾಡಿನ ಬಾಗಲಕೋಟೆ, ಹಾವೇರಿ, ಕೊಪ್ಪಳ, ದಾವಣಗೆರೆ ಹಾಗೂ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಲ್ಲಿ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಉಳಿದಂತೆ ಬಿಸಿಲ ಧಗೆಯು ಸುಸ್ತು ಮಾಡಲಿದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬೀದರ್‌ನಲ್ಲಿ 4 ಸೆಂ.ಮೀ ಮಳೆ

ರಾಜ್ಯದಲ್ಲಿ ಭಾನುವಾರಂದು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಬೀದರ್ 4 ಸೆಂ.ಮೀನಷ್ಟು ಮಳೆಯಾಗಿರುವ ವರದಿ ಆಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಇತ್ತು.

ಗರಿಷ್ಠ ಉಷ್ಣಾಂಶ 38.7 ಡಿ.ಸೆ ತುಮಕೂರಿನ ಚಿಕ್ಕನಹಳ್ಳಿಯಲ್ಲಿ ಎ ಡಬ್ಲ್ಯೂ ಎಸ್ ದಾಖಲಾಗಿದೆ. ಕನಿಷ್ಠ ಉಷ್ಣಾಂಶ 17.3 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 17.9 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದನ್ನೂ ಓದಿ: Road Accident : ರಸ್ತೆ ತಿರುವಿನಲ್ಲಿತ್ತು ಆಪತ್ತು; ಬೈಕ್‌ ಸವಾರನ ಜೀವ ತೆಗೆದ ಟಿಪ್ಪರ್‌ ಲಾರಿ

ರಾಮನಗರ ಮತ್ತು ಕೋಲಾರ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ನಿಂದ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಾವೇರಿ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

Exit mobile version