ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧೆಡೆ ಭಾರಿ ಮಳೆಯಾಗಿದ್ದು (Rain News), ಹೊರಮಾವು ಬಳಿಯ ಸಾಯಿಲೇಔಟ್‌ನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಬಟ್ಟೆ ಎಲ್ಲವೂ ನೀರು ಪಾಲಾಗಿದ್ದು, ಸ್ಥಳೀಯ ನಿವಾಸಿಗಳು ಜಾಗರಣೆ ಮಾಡುವಂತಾಯಿತು.
ಪ್ರತಿ ಬಾರಿ ಮಳೆ ಬಂದಾಗಲೂ ಸಾಯಿಲೇಔಟ್‌ನಲ್ಲಿ ಅವಾಂತರ ಸೃಷ್ಟಿಯಾಗುತ್ತಿದೆ. ಕಳೆದ ಬಾರಿ ಮಳೆ ಬಂದಾಗ ಸಮಸ್ಯೆ ಬಗೆಹರಿಸುವುದಾಗಿ ಸ್ಥಳೀಯ ಶಾಸಕರು ಭರವಸೆ ನೀಡಿದ್ದರೂ ಅದು ಈ ತನಕ ಈಡೇರಿಲ್ಲ. ರಾಜಕಾಲುವೆ ಒತ್ತುವರಿಯಿಂದ ಮಳೆ ಬಂದಾಗ ನೀರು ನಿಂತು ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣ ಆಗುತ್ತಿದೆ.
ಧರೆಗುರುಳಿದ ಮರಗಳು
ಭಾರಿ ಮಳೆಗೆ ನಗರದ ಎರಡು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಬಸವನಗುಡಿ ಹಾಗೂ ಮೇಖ್ರಿ ವೃತ್ತದಲ್ಲಿ ಬೃಹತ್ ಮರಗಳು ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಯಿತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಶ್ರೀರಾಂಪುರದಲ್ಲಿ ಡ್ರೈನೇಜ್ ನೀರು ಹೊರ ಬಂದು ಕೆಲ ಮನೆಗಳಿಗೆ ನುಗ್ಗಿದರಿಂದ ಹೊರಗೆ ಹಾಕುವುದೇ ಸಾಹಸದ ಕೆಲಸವಾಯಿತು. ಶಿವಾನಂದ ವೃತ್ತ, ಬಸವನಗುಡಿ, ಮಲ್ಲೇಶ್ವರ, ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಗಳಲ್ಲಿ ನೀರು ನಿಂತು ಪಾದಚಾರಿಗಳು ಓಡಾಡಲು ಕಷ್ಟಪಡಬೇಕಾಯಿತು.