ದಾವಣಗೆರೆ: ದಾವಣಗೆರೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ (Rain News) ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ- ಚೊರಡೋಣಿ ಮಧ್ಯ ತುಂಬಿ ಹರಿಯುತ್ತಿದ್ದ ಸೇತುವೆ ದಾಟಲು ಹೋಗಿ ಶಿಕ್ಷಕರೊಬ್ಬರು ಕೊಚ್ಚಿ ಹೋಗಿದ್ದರು. ಆದರೆ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಶಿಕ್ಷಕನ ಪ್ರಾಣ ಉಳಿದಿದೆ.
ಚನ್ನಗಿರಿ ತಾಲೂಕಿನ ಬಸವಪಟ್ಟಣದಿಂದ ಶಿಕ್ಷಕ ತಿಮ್ಮಯ್ಯ ದೊಡ್ಡಘಟ್ಟ ಗ್ರಾಮದ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ಚನ್ನಗಿರಿ ಭಾಗದಲ್ಲಿ ಸಾಕಷ್ಟು ಮಳೆಯಾಗಿತ್ತು. ಭಾರಿ ಮಳೆಗೆ ನೀರು ಹರಿದು ರಸ್ತೆ ಮೇಲೆ ಬಂದಿದೆ. ಆದರೆ ಇದರ ಅರಿವು ಇರದ ಶಿಕ್ಷಕ ತಿಮ್ಮಯ್ಯ ಚಿರಡೋಣಿ-ದೊಡ್ಡಘಟ್ಟ ಮಧ್ಯ ಬರುವ ಸೇತುವೆ ದಾಟಲು ಹೋಗಿದ್ದಾರೆ.
ಆದರೆ ಬೈಕ್ ಸಮೇತ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಶಿಕ್ಷಕ ತಿಮ್ಮಯ್ಯ ಕೊಚ್ಚಿ ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ. ನಂತರ ಅಲ್ಲಿದ್ದ ಜನರು ಶಿಕ್ಷಕನನ್ನು ಕಾಪಾಡಿದ್ದು, ಬಳಿಕ ಬೈಕ್‌ಗಾಗಿ ಹುಡುಕಾಟ ನಡೆಸಿ ಮೇಲಕ್ಕೆ ಎತ್ತಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮನೆ ಗೋಡೆ ಕುಸಿದು ವೃದ್ಧ ಸಾವು
ಭಾರಿ ಮಳೆಗೆ ಚಿಕ್ಕಮಗಳೂರಲ್ಲಿ ಗೋಡೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಕಡೂರು ತಾಲೂಕಿನ ಮಚೇರಿ ಕೋಡಿಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮದ ಲಚ್ಚ ನಾಯ್ಕ (80) ಮೃತ ದುರ್ದೈವಿ. ಗೋಡೆಯಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಲಚ್ಚ ನಾಯ್ಕ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Bengaluru Rain : ಅಬ್ಬಾ.. ಬೆಂಗಳೂರಲ್ಲಿ ಏನ್ ಮಳೆ ರೀ; ನೀರಲ್ಲಿ ತೇಲಿ ಬಂದ ಗನ್‌ಗಳು!
ಬಸ್ ನಿಲ್ದಾಣ ಜಲಾವೃತ
ಮಂಡ್ಯದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಅವಾಂತರವೇ ಸೃಷ್ಟಿಯಾಗಿತ್ತು. ಕೆ.ಆರ್.ಪೇಟೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತಗೊಂಡಿತ್ತು. ನಿಲ್ದಾಣದ ಅಂಗಡಿ ಮಳಿಗೆಗೆ ನೀರು ನುಗ್ಗಿತ್ತು. ಇತ್ತ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದರು. ಲಕ್ಷಾಂತರ ರೂ ಖರ್ಚು ಮಾಡಿ ನಿಲ್ದಾಣದಲ್ಲಿ ಕಾಮಗಾರಿ ನಡೆಸಿದ್ದರೂ ಕೂಡ ಕೆರೆಯಂತಾಗಿದೆ. ಸರಿಯಾದ ಒಳ ಚರಂಡಿ ವ್ಯವಸ್ಥೆ ಇಲ್ಲದೆ ನಿಲ್ದಾಣಕ್ಕೆ ನೀರು ನುಗ್ಗಿದೆ. ಕಳೆದ ತಿಂಗಳು ಮಳೆಯಿಂದಾಗಿ ಬಸ್ ನಿಲ್ದಾಣ ಜಲಾವೃತಗೊಂಡಿತ್ತು. ಪದೇಪದೆ ಈ ರೀತಿಯ ಪರಿಸ್ಥಿತಿಗೆ ಸ್ಥಳೀಯರು ಹಾಗೂ ಅಂಗಡಿ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ.
ಮಳೆಗೆ ಬೆಳೆ ಹಾನಿ
ರಾಯಚೂರಿನ ಲಿಂಗಸಗೂರಿನಲ್ಲಿ ರಾತ್ರಿ ಸುರಿದ ಅಕಾಲಿಕ ಮಳೆಗೆ ಬೆಳೆ ಹಾನಿಯಾಗಿದೆ. ತಾಲೂಕಿನ ವಿವಿಧೆಡೆ ಭತ್ತ, ಮೆಣಸಿನಕಾಯಿ ಬೆಳೆಗಳಿಗೆ ಹಾನಿಯಾಗಿದೆ. ಆನಾಹೊಸೂರು, ಜಾಗಿರನಂದಿಹಾಳ, ಈಚನಾಳ, ಚಿತ್ತಾಪುರದಲ್ಲಿ ಬೆಳೆ ಹಾನಿಯಾಗಿದೆ. ಏತ ನೀರಾವರಿ ಕಾಲುವೆ ಮೂಲಕ ನೀರು ಹರಿಸಿ ಬೆಳೆದಿದ್ದ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಬರಗಾಲದ ಮಧ್ಯೆ ಅಲ್ಪಸ್ವಲ್ಪ ಬೆಳೆ ಬೆಳೆದಿದ್ದ ರೈತರಿಗೆ ಸಂಕಷ್ಟ ಎದುರಾಗಿದೆ.
ಸಿಡಿಲಿಗೆ ಹೊತ್ತಿ ಉರಿದ ಮರ
ತಡ ರಾತ್ರಿ ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಗುಡುಗು ಸಿಡಿಲು ಸಹಿತ ಅಬ್ಬರದ ಮಳೆಯಾಗಿದೆ. ಮಿಂಚಿನ ಆರ್ಭಟಕ್ಕೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ. ಮನೆಯಲ್ಲಿ ಇರುವ ಯುಪಿಎಸ್ ಕೂಡ ಬ್ಲಾಸ್ಟ್ ಆಗಿದೆ. ಆದರೆ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಪ್ಪಲಮೊಡುಗು ಗ್ರಾಮದಲ್ಲಿ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ