ಕಾರವಾರ/ಕೊಡಗು/ಹಾಸನ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ (Rain News) ಗಂಗಾವಳಿ ನದಿ ಮೈದುಂಬಿ ಹರಿಯುತ್ತಿದೆ. ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಬಿಳಿಹೊಂಯ್ಗಿ ಗ್ರಾಮದ 30ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ರಸ್ತೆಯ ಮೇಲೂ ನೀರು ನಿಂತು ಓಡಾಟಕ್ಕೂ ಅವ್ಯವಸ್ಥೆ ಆಗಿದೆ. ಸೊಂಟದವರೆಗೂ ನೀರು ನಿಂತಿದ್ದು, ಜನರಲ್ಲೂ ಆ ನೆರೆಯಲ್ಲೇ ನಡೆದಾಡುತ್ತಿದ್ದಾರೆ. ಮತ್ತೆ ಮಳೆ ಹೆಚ್ಚಾದಲ್ಲಿ ಮನೆಯೊಳಗೆ ನೀರು ನುಗ್ಗುವ ಆತಂಕ ಇದೆ.
ಭಾರಿ ಮಳೆಗೆ ಉರುಳಿ ಬಿದ್ದ ತೆಂಗಿನ ಮರ
ಶಿವಮೊಗ್ಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಸೊರಬ ಪಟ್ಟಣದ ಆನೆಮುಡಿಕೆ ರಸ್ತೆಯಲ್ಲಿ ತೆಂಗಿನಮರ ಉರುಳಿ ಸಿಮೆಂಟ್ ಗೋದಾಮಿನ ಮೇಲೆ ಬಿದ್ದಿದೆ. ಪರಿಣಾಮ ಗೋದಾಮು ಸೇರಿ ಪಕ್ಕದಲ್ಲಿದ್ದ ಕಾರಿನ ಶೆಡ್‌ಗೂ ಹಾನಿಯಾಗಿದೆ. ಕಾಕಡೆ ಕುಟುಂಬಸ್ಥರ ಮನೆಯ ಹಿಂಭಾಗದ ಬೃಹತ್ ಗಾತ್ರದ ತೆಂಗಿನ ಮರ ಬಿದ್ದಿದೆ. ತೇಜಪ್ಪ ಎಂಬುವವರಿಗೆ ಸೇರಿದ ರೇಣುಕಾಂಬ ಟ್ರೇಡರ್ಸ್‌ನ 50 ಚೀಲ ಸಿಮೆಂಟ್ ನೀರುಪಾಲಾಗಿದೆ.
ವಿಶ್ವನಾಥ ಎಂಬುವವರ ವಾಸದ ಮನೆ ಹಿಂಭಾಗದ ಕಾರು ಶೆಡ್ ಹಾಳಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ವಿದ್ಯುತ್ ತಂತಿಯ ಮೇಲೂ ಮರ ಬಿದ್ದಿದ್ದು, ಆನೆಮುಡಿಕೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹಾಸನದಲ್ಲಿ ಕುಸಿದು ಬಿದ್ದ ಮನೆ
ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮನೆಯೊಂದು ಕುಸಿದು ಬಿದ್ದಿದೆ. ಬೇಲೂರು ತಾಲೂಕಿನ ಪಡುವಳಲು ಗ್ರಾಮದಲ್ಲಿ ಮಹೇಶ್ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಮಳೆಯಿಂದ ಇಂದು (ಜು.24) ಬೆಳಗ್ಗೆ 4 ಗಂಟೆಗೆ ಕುಸಿದಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿದೆ. ಮನೆ ಬೀಳುವ ಭೀತಿಯಿಂದ ಕುಟುಂಬದ ಸದಸ್ಯರು ನಿನ್ನೆ ಭಾನುವಾರವೇ ಕೊಟ್ಟಿಗೆಗೆ ಶಿಫ್ಟ್ ಆಗಿದ್ದರು.ಹೀಗಾಗಿ ಸಂಭವಿಸದಬಹುದಾದ ಅನಾಹುತ ತಪ್ಪಿದೆ.
ಇದನ್ನೂ ಓದಿ: Rain News : ಮಳೆಗೆ ಮುಳುಗಿದ ಕಡಬ; ಒದ್ದೆ ಮೈಯಲ್ಲಿ ನಡುಗುತ್ತಲೇ ಪರೀಕ್ಷೆ ಬರೆದರು!
ವರದಾ ನದಿ ಅಬ್ಬರಕ್ಕೆ ನಲುಗಿದ ಹಾವೇರಿ
ಹಾವೇರಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದರೆ ಮತ್ತೊಂದು ಕಡೆ ವರದಾ ನದಿ ಉಕ್ಕಿ ಹರಿಯುತ್ತಿದೆ. ವರದಾ ನದಿ ಅಬ್ಬರಕ್ಕೆ ನೂರಾರು ಎಕರೆ ಬೆಳೆ ನಾಶವಾಗಿದೆ. ರೈತರು ಬೆಳೆದಿದ್ದ, ಗೋಬಿನಜೋಳ, ಹತ್ತಿ, ಶೇಂಗಾ ಬೆಳೆಯು ನೀರಿನಲ್ಲಿ ಮುಳುಗಡೆಯಾಗಿದೆ. ಮಳೆಯಿಂದ ಬೆಳೆ ಹಾನಿಯಾದರೂ ಅಧಿಕಾರಿಗಳು ಪರಿಶೀಲನೆಗೆ ಬಾರದ್ದಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬೆಡ್ತಿಹಳ್ಳ ಉಕ್ಕಿ ಹರಿಯುತ್ತಿದ್ದು, ಹೊಲಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿದೆ. ಮಳೆಯ ಹೊಡೆತಕ್ಕೆ ನೀರಲ್ಲಿ ಕಬ್ಬು, ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿದೆ.
ಹಾಸನದಲ್ಲಿ ಭೂ ಕುಸಿತ
ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿಯುವ ಆತಂಕ ಇದೆ. ಸಕಲೇಶಪುರ ಪಟ್ಟಣದ ಸಮೀಪದ ಗುಡ್ಡ ಕುಸಿಯುತ್ತಿದೆ. ಒಂದೊಂದಾಗೇ ಮರಗಳು ಉರುಳುತ್ತಿದೆ. ಮೇಲ್ಬಾಗದಲ್ಲಿರುವ ಮನೆಗಳೂ ಕೂಡಾ ಬೀಳುವ ಆತಂಕದಲ್ಲಿದ್ದು, ಹತ್ತಾರು ಕುಟುಂಬಗಳು ಭಯದಲ್ಲೇ ದಿನದೂಡುವಂತಾಗಿದೆ. ಮಂಗಳೂರು – ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿಯುತ್ತಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ