ಮಂಗಳೂರು/ ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು (Rain News), ನೋಡ ನೋಡುತ್ತಿದ್ದಂತೆ ಮನೆ ಮುಂದಿದ್ದ ಬಾವಿಯೊಂದು ಪಾತಾಳ (well collapsed) ಸೇರಿದೆ. ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ಎಂಬಲ್ಲಿ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಭೂಮಿ ಒಳಗೆ ಬಾವಿ ಜಾರಿದೆ. ಬಾವಿ ಪಕ್ಕದಲ್ಲೆ ಮನೆ ಇದ್ದು ಅಪಾಯದಲ್ಲಿದ್ದು, ಭೂಕುಸಿತದಿಂದಾಗಿ ಮನೆಯೊಳಗೆ ಬಿರುಕು ಬಿಟ್ಟಿದೆ.
ಬಪ್ಪಳಿಗೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅಗ್ನಿಶಾಮಕದಳದಿಂದ ಮನೆ ಮಂದಿಯನ್ನು ರಕ್ಷಣೆ ಮಾಡಿ, ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮನೆ ಸುತ್ತಲೂ ತಾತ್ಕಾಲಿಕ ತಡೆ ಹಾಕಲಾಗಿದೆ.
ವಿದ್ಯುತ್ ಸಂಪರ್ಕ ಕಡಿತ
ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೊಟ್ಟಿಗೆಹಾರ, ಬಣಕಲ್, ಬಾಳೂರು ಚಾರ್ಮುಡಿ ಘಾಟ್‌ನಲ್ಲಿ ಕಳೆದ ಎರಡು ಗಂಟೆಯಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ವಾಹನಗಳೆಲ್ಲವೂ ನಿಂತಲ್ಲೇ ನಿಂತಿವೆ. ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಜತೆಗೆ ನದಿ ಪಾತ್ರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.
ರಾಜಧಾನಿ ಬೆಂಗಳೂರಲ್ಲಿ ವರುಣಾಘಾತ
ಕಳೆದೊಂದು ವಾರದಿಂದ ಆಗೊಮ್ಮೆ ಈಗೊಮ್ಮ ಕಾಣಿಸುತ್ತಿದ್ದ ವರುಣ ಶುಕ್ರವಾರ ಅಬ್ಬರಿಸುತ್ತಿದ್ದಾನೆ. ರೇಸ್ ಕೋರ್ಸ್, ವಿಧಾನಸೌಧ, ಮೆಜೆಸ್ಟಿಕ್, ಶಿವಾಜಿನಗರ, ಕಬ್ಬನ್ ಪಾರ್ಕ್ ಸೇರಿದಂತೆ ಶಿವಾನಂದ ಸರ್ಕಲ್ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ. ದಿಢೀರ್ ಮಳೆಗೆ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಗಾಳಿ ಸಹಿತ ಮಳೆಯಾಗುತ್ತಿದ್ದು, ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ