Site icon Vistara News

Rain News : ಮಳೆ ಅನಾಹುತಕ್ಕೆ ಪ್ರತ್ಯೇಕ ಕಡೆ ಮೂವರು ವೃದ್ಧೆಯರು ಸಾವು

Rain Effect in karnataka

ಬೆಳಗಾವಿ/ಚಿಕ್ಕಮಗಳೂರು: ರಾಜ್ಯದಲ್ಲಿ ಭಾರಿ (Rain news) ಮಳೆಯಾಗುತ್ತಿದ್ದು, ಬೆಳಗಾವಿಯಲ್ಲಿ ಮನೆ ಗೋಡೆ ಕುಸಿದು ವೃದ್ಧೆ ಜೀವ ಬಿಟ್ಟಿದ್ದಾರೆ. ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆಗೆ (Rain Effect) ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಶವವಾಗಿ ಪತ್ತೆ ಆಗಿದ್ದಾರೆ. ಕುಸಿದ ಗೋಡೆಯಡಿ ಸಿಲುಕಿ ಮತ್ತೊಬ್ಬ ವೃದ್ಧೆಯು ಮೃತಪಟ್ಟಿದ್ದಾರೆ.

ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಮೊದಲ ಬಲಿ ಆಗಿದೆ. ಮನೆ ಗೋಡೆ ಕುಸಿದು ಗಂಭೀರ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಈರಮ್ಮ ಪತ್ರೆಮ್ಮನವರ (95) ಮೃತಪಟ್ಟಿದ್ದಾರೆ.

ಮೃತ ವೃದ್ಧೆ ಈರಮ್ಮ ಪತ್ರೆಮ್ಮನವರ

ನಿರಂತರ ಮಳೆಗೆ ನಾಲ್ಕು ದಿನಗಳ ಹಿಂದೆ ಮನೆಯ ಮೇಲ್ಚಾವಣಿ ಕುಸಿದಿತ್ತು. ಘಟನೆಯಲ್ಲಿ ವೃದ್ಧೆ ಸೇರಿ 13 ಜನ ಕುಟುಂಬ ಸದಸ್ಯರಿಗೆ ಗಾಯವಾಗಿತ್ತು. ಗಂಭೀರ ಗಾಯಗೊಂಡಿದ್ದ ಈರಮ್ಮ ಪತ್ರೆಮ್ಮನವರ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಪತ್ರೆಮ್ಮನವರ ಮೃತಪಟ್ಟಿದ್ದರೆ, ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಶವವಾಗಿ ಪತ್ತೆಯಾದ ವೃದ್ಧೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುವ ಮಳೆಯ ನಡುವೆ (rain news) ಅಡಿಕೆ ತೋಟ ನೋಡಲು ತೆರಳಿದ ವೃದ್ಧೆಯೊಬ್ಬರು ನಿನ್ನೆ ಮಂಗಳವಾರ (ಜು.25) ಕಣ್ಮರೆಯಾಗಿದ್ದರು. ಇದೀಗ ನೀರುಪಾಲಾದ ವೃದ್ಧೆ ಶವವಾಗಿ ಪತ್ತೆ ಆಗಿದ್ದಾರೆ. ಈ ಮೂಲಕ ಮಳೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರನೇ ಬಲಿ ಆಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಹೊಸಸಿದ್ದರಹಳ್ಳಿ ಗ್ರಾಮದ ರೇವಮ್ಮ (62) ಮೃತ ದುರ್ದೈವಿ.

ಸತತ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಪತ್ತೆ ಮಾಡಿದ ಅಗ್ನಿಶಾಮಕ ದಳ ಸಿಬ್ಬಂದಿ

ಇದನ್ನೂ ಓದಿ: Rain News : ಮಳೆಗೆ 212ಕ್ಕೂ ಹೆಚ್ಚು ಗ್ರಾಮಗಳ ಕರೆಂಟ್‌ ಕಟ್‌; ರೈಲು ಸಂಚಾರ ಸ್ಥಗಿತ

ರೇವಮ್ಮ ತಮ್ಮ ಅಡಿಕೆ ತೋಟ ನೋಡಲೆಂದು ಹೋಗಿದ್ದು, ತೋಟದ ಪಕ್ಕದಲ್ಲಿದ್ದ ತಾಯಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಾಯಿ ಹಳ್ಳದ ಬಳಿ‌ ವೃದ್ಧೆಯ ಚಪ್ಪಲಿ, ಉರುಗೋಲು ಪತ್ತೆಯಾಗಿತ್ತು. ಶೋಧ ಕಾರ್ಯಾಚರಣೆ ನಡೆಸಿ, ಚಿಕ್ಕಮಗಳೂರಿನ ಕಡೂರು ತಾಲೂಕಿನ ಹೊಸಸಿದ್ರಳ್ಳಿ ಗ್ರಾಮದಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ.

ಮನೆ ಗೋಡೆ ಕುಸಿದು ವೃದ್ಧೆ ಸಾವು

ಹಾಸನ‌ ಜಿಲ್ಲೆಯಲ್ಲಿ ಗಾಳಿ ಮಳೆಗೆ ಮನೆಗೋಡೆ ಕುಸಿದು ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಘಟನೆ ನಡೆದಿದೆ.ಕುಸಿದ ಗೋಡೆಯಡಿ ಸಿಲುಕಿ ಗೌರಮ್ಮ(62) ಸಾವಿಗೀಡಾಗಿದ್ದು, ಪತಿ ನಟರಾಜ್ ಅವರಿಗೆ ಗಂಭೀರ ಗಾಯಗಳಾಗಿವೆ.

ಗೋಡೆ ಕುಸಿದು ವೃದ್ಧೆ ಸಾವು

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದು ಅವಘಡ ಸಂಭವಿಸಿದೆ. ನಿನ್ನೆ ರಾತ್ರಿ ಮನೆಯೊಳಗೆ ಅಡುಗೆ ಮಾಡುತ್ತಾ ಕುಳಿತಿದ್ದ ಗೌರಮ್ಮ ಅವರ ಮೇಲೆ ಏಕಾಏಕಿ ಗೋಡೆ ಕುಸಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಾಯಾಳು ಪತಿ ನಟರಾಜ್‌ಗೆ ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version