ವಿಜಯಪುರ: ಉತ್ತರ ಒಳನಾಡಲ್ಲಿ ನೈರುತ್ಯ ಮುಂಗಾರು (Southwest monsoon) ಚುರುಕುಗೊಂಡಿದ್ದು, ಭಾರಿ ಮಳೆಯು (Rain Effected) ನಾನಾ ಅವಾಂತರವನ್ನೇ ಸೃಷ್ಟಿ ಮಾಡಿದೆ. ವಿಜಯಪುರ ಜಿಲ್ಲೆಯಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆಯಾಗುತ್ತಿದೆ. ಇಲ್ಲಿನ ಜುಮನಾಳ ಗ್ರಾಮದಲ್ಲಿ ಮಳೆಗೆ (Rain News) ಸಾರ್ವಜನಿಕ ಶೌಚಾಲಯ ನೆನೆದು ಕುಸಿದು ಬಿದ್ದಿರುವ (Roof collapse) ಘಟನೆ ನಡೆದಿದೆ. ಶೌಚಾಲಯಕ್ಕೆಂದು ಹೋಗಿದ್ದ ಮೂವರು ಮಹಿಳೆಯರು ಸಿಲುಕಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಶೌಚಾಲಯದ ಚಾವಣಿ ಕುಸಿತದಿಂದಾಗಿ ಕಮಲಾಬಾಯಿ ಬಗಲಿ, ಮುಸ್ಕಾನ್ ಕೊಲ್ಹಾರ ಹಾಗೂ ಮುರ್ತುಜಭೀ ಭಾಂಗಿ ಎಂಬವರಿಗೆ ಗಾಯಗಳಾಗಿದೆ. ಗಾಯಾಳನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಭಾರಿ ಮಳೆಗೆ ಸೇತುವೆಗಳು ಜಲಾವೃತ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಲ್ಲಾಮಾರಿ ಜಲಾಶಯ ಪೂರ್ಣ ಭರ್ತಿಯಾಗಿದೆ. ಜಲಾಶಯ ಭರ್ತಿ ಆದ ಹಿನ್ನೆಲೆಯಲ್ಲಿ ಮುಲ್ಲಾಮಾರಿ ಜಲಾಶಯದ ಮೂರು ಗೇಟ್ ಮೂಲಕ ನೀರು ಹೊರಕ್ಕೆ ಬಿಡಲಾಗಿದೆ.
2 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಟ್ಟಿದ್ದು, ಇದರಿಂದ ಕೆಳಭಾಗದ ಚಿಮ್ಮನಚೂಡ, ತಾಜಲಾಪೂರ, ಕನಕಪೂರ, ದರ್ಗಾಪಲ್ಲಿ ಸೇತುವೆಗಳು ಜಲಾವೃತಗೊಂಡಿದೆ. ಮಾತ್ರವಲ್ಲದೆ ಹತ್ತಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಚಿಮ್ಮನಚೋಡ ಬ್ರಿಜ್ ಮೇಲೆಯೇ ನೀರು ಹರಿಯುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಪೊಲೀಸ್ ಕಾವಲು ಹಾಕಲಾಗಿದೆ.
ಮಳೆಯಿಂದ ಕೆರೆಯಂತಾದ ಶಾಲೆ
ವಿಜಯನಗರದಲ್ಲಿ ಸಣ್ಣ ಪ್ರಮಾಣದ ಮಳೆಯಾದರೂ ನಾನಾ ಅವಾಂತರವನ್ನೇ ಸೃಷ್ಟಿಸುತ್ತದೆ. ಇಲ್ಲಿನ ಹೊಸಪೇಟೆಯ ಪಟ್ಟಣದ ಚಪ್ಪರದಳ್ಳಿಯ ಕೊರಗಲ್ ಗೋಪಾಲ ಶೆಟ್ಟಿ ಸರ್ಕಾರಿ ಪ್ರಾಥಮಿಕ ಸರ್ಕಾರಿ ಶಾಲೆಯು ಕೆರೆಯಂತಾಗಿದೆ. ಮಕ್ಕಳು ಶಾಲೆಗೆ ಹೋಗಬೇಕಾದರೆ ಮೊಣಕಾಲಷ್ಟು ನಿಂತಿರುವ ನೀರಿನಲ್ಲೇ ನಡೆದು ಹೋಗಬೇಕು. ಮಳೆಯಿಂದಾಗಿ ಆವರಣದಲ್ಲಿ ಹೊಂಡವೇ ನಿರ್ಮಾಣವಾಗುತ್ತದೆ.
ಶಾಲೆಗೆ ಹೋಗಲು ಸಣ್ಣ ದ್ವಾರ ಇದೆ, ಆ ದ್ವಾರವೂ ಸಂಪೂರ್ಣ ನೀರುಮಯವಾಗಿದೆ. ಇದಲ್ಲದೆ ಶೌಚಾಲಯದ ನೀರು ಕೂಡ ಇದಕ್ಕೆ ಸೇರ್ಪಡೆಯಾಗುತ್ತಿದೆ. ಇದರಿಂದ ಮಕ್ಕಳಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಇದನ್ನು ಸಂಬಂಧಿಸಿದ ಇಲಾಖೆ ಸರಿಪಡಿಸಲು ಪೋಷಕರು ಒತ್ತಾಯ ಮಾಡಿದ್ದಾರೆ.
ದಡಕ್ಕೆ ಅಪ್ಪಳಿಸುತ್ತಿರುವ ಆಳೆತ್ತರ ಅಲೆಗಳು
ಕರಾವಳಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಹವಾಮಾನ ಇಲಾಖೆಯು ಉತ್ತರಕನ್ನಡ ಜಿಲ್ಲೆಗೆ ಶನಿವಾರ ಆರೆಂಜ್ ಅಲರ್ಟ್ ನೀಡಿದೆ. ಧಾರಾಕಾರ ಮಳೆಗೆ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ. ದಡಕ್ಕೆ ಆಳೆತ್ತರ ಅಲೆಗಳು ಅಪ್ಪಳಿಸುತ್ತಿದೆ. ಭಾರಿ ಗಾಳಿ ಸಹಿತ ಮಳೆ ಮುನ್ಸೂಚನೆ ಹಿನ್ನೆಲೆ ಸಾಂಪ್ರದಾಯಿಕ ಮೀನುಗಾರಿಕೆ ಬಂದ್ ಆಗಿದೆ.
ಮೀನುಗಾರರು ಬೋಟು, ಬಲೆಗಳನ್ನು ದಡದಲ್ಲಿ ಸುರಕ್ಷಿತವಾಗಿ ಇರಿಸುತ್ತಿದ್ದಾರೆ. ಅಲೆಗೆ ಸಿಕ್ಕು ಕೊಚ್ಚಿ ಹೋಗದಂತೆ ಎತ್ತರದ ಸ್ಥಳದಲ್ಲಿ ಬೋಟುಗಳ ನಿಲುಗಡೆ ಮಾಡುತ್ತಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಮಳೆಯಬ್ಬರದಿಂದ ಮೀನುಗಾರಿಕೆಗೆ ಅಡ್ಡಿಯಾಗಿದೆ.
ಇದನ್ನೂ ಓದಿ: Weather Report : ಇಂದಿನಿಂದ ಐದು ದಿನ ಭಾರಿ ಮಳೆ; ಎಲ್ಲೆಲ್ಲಿ ವರುಣಾರ್ಭಟ
ತಗ್ಗು ಪ್ರದೇಶಿಗಳಿಗೆ ನುಗ್ಗಿದ ನೀರು
ಯಾದಗಿರಿಯಲ್ಲಿ ಭಾರಿ ಮಳೆ ಅಬ್ಬರ ಮುಂದುವರಿದಿದ್ದು, ಮನೆಗಳ ಸುತ್ತಲು ನೀರು ಸಂಗ್ರಹದಿಂದಾಗಿ ಜನರು ಪರದಾಡುವಂತಾಗಿದೆ. ಯಾದಗಿರಿಯ ಡಾ.ಬಿ.ಆರ್.ಅಂಬೇಡ್ಕರ್ ನಿವಾಸಿಗಳ ಸಂಕಷ್ಟವನ್ನು ಹೇಳುವವರು,ಕೇಳುವವರು ಇಲ್ಲದಂತಾಗಿದೆ.
ತಗ್ಗು ಪ್ರದೇಶದ ನಾಲ್ಕು ಮನೆಗಳ ಸುತ್ತಲೂ ಮಳೆ ನೀರು ಸಂಗ್ರಹವಾಗಿದ್ದು, ಮನೆಗೆ ತೆರಳಲು ಪರಾದಾಡುವಂತಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 6.1 ಎಂಎಂ ಮಳೆಯಾಗಿದೆ. ಮಳೆ ನೀರು ಹರಿದು ಹೋಗಲು ಅಗತ್ಯ ಕ್ರಮಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ. ಇತ್ತ ಹಾವು ಚೇಳುಗಳ ಕಾಟ ಹೆಚ್ಚಾಗಿದ್ದು, ಭೀತಿಯಲ್ಲೇ ದಿನದೂಡುವಂತಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ