ದಾವಣಗೆರೆ/ಮಂಗಳೂರು: ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್‌ನಿಂದಾಗಿ ರಾಜ್ಯದಲ್ಲಿ ವರುಣ (Rain News) ಅಬ್ಬರಿಸಿದ್ದಾನೆ. ದಾವಣಗೆರೆಯ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಕಾಟಲಿಂಗಪ್ಪ (42), ರಾಜು (32) ಮೃತ ದುರ್ದೈವಿಗಳು.
ಇಬ್ಬರು ಜಮೀನಿನಲ್ಲಿ ಕೆಲಸ ಮಾಡುವಾಗ ಏಕಾಏಕಿ ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಮರದ ಆಶ್ರಯ ಪಡೆದಿದ್ದ ಇವರಿಬ್ಬರಿಗೆ ಸಿಡಿಲು ಬಡಿದಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಂಗಳೂರು ಬೀಚ್‌ನಲ್ಲಿ ಪ್ರವಾಸಿಗರಿಗೆ ಹೈ ಅಲರ್ಟ್
ದಕ್ಷಿಣ ಕನ್ನಡದ ಹಲವೆಡೆ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುತ್ತಿದೆ. ಮಳೆ-ಗಾಳಿಯ ಕಾರಣಕ್ಕೆ ಬೀಚ್‌ಗಳ ಬಳಿಯಿರುವ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಉಳ್ಳಾಲ, ಉಚ್ಚಿಲ, ಸೋಮೇಶ್ವರ ಭಾಗದಲ್ಲಿ ಜೋರಾದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ. ಸಮುದ್ರ ತೀರದ ಮನೆಗಳು, ರಸ್ತೆ, ಗೆಸ್ಟ್ ಹೌಸ್‌ಗಳಲ್ಲಿರುವವರಿಗೆ ಅಪಾಯದ ಭೀತಿ ಇದೆ. ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬೀಚ್‌ಗೆ ಇಳಿಯದಂತೆ ಪ್ರವಾಸಿಗರಿಗೆ ಅಲರ್ಟ್
ಸಮುದ್ರ ಮಟ್ಟದಲ್ಲಿ ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ಸಮುದ್ರ ತೀರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಖಡಕ್ ಸೂಚನೆ ನೀಡಲಾಗಿದೆ. ಉಳ್ಳಾಲ ಕಡಲ ತೀರದಲ್ಲಿ ಜೋರಾಗಿ ಗಾಳಿ ಬೀಸುತ್ತಿದ್ದು, ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ಇತ್ತ ಚಂಡಮಾರುತದ ಭೀತಿ ಹಿನ್ನೆಲೆ ಬೀಚ್‌ಗಳತ್ತ ಯಾವ ಪ್ರವಾಸಿಗರು ತಲೆಹಾಕುತ್ತಿಲ್ಲ.
ಇದನ್ನೂ ಓದಿ: Anganawadi worker: ತಂಗಿಗೆ ನನ್ನ ಕೆಲಸ ಕೊಡಿ ಎಂದು ತನ್ನ ಬದುಕಿಗೆ ದುರಂತ ಅಂತ್ಯ ಹಾಡಿದ ಅಂಗನವಾಡಿ ಕಾರ್ಯಕರ್ತೆ!
ಬೆಂಗಳೂರಲ್ಲಿ ತಂಪೆರೆದ ವರುಣ
ರಾಜಧಾನಿ ಬೆಂಗಳೂರಲ್ಲಿ ಶುಕ್ರವಾರ (ಜೂ.9) ಸಂಜೆ ವೇಳೆಗೆ ಧಾರಾಕಾರ ಮಳೆಯಾಗಿದೆ. ವಿಧಾನಸೌಧ, ಕಬ್ಬನ್‌ಪಾರ್ಕ್, ಬಾಳೇಕುಂದ್ರಿ ಸರ್ಕಲ್, ಶಿವಾಜಿನಗರ ಸೇರಿದಂತೆ ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ ಸುತ್ತಮುತ್ತ ವ್ಯಾಪಕ ಮಳೆಯಾಗಿದೆ. ಮಲ್ಲೇಶ್ವರಂ, ಸದಾಶಿವನಗರ, ರಾಜಾಜಿನಗರದಲ್ಲೂ ಭಾರಿ ಮಳೆಯಾಗಿದೆ. ಸಂಜೆ ವೇಳೆಗೆ ಶುರುವಾದ ಮಳೆಯಿಂದಾಗಿ ಕೆಲಸ ಮುಗಿಸಿ ಮನೆಗೆ ಹೋಗುವವರು ಪರದಾಡಬೇಕಾಯಿತು. ದಿಢೀರ್ ಮಳೆಗೆ ಬೈಕ್ ಸವಾರರು ಬಸ್ ನಿಲ್ದಾಣದ ಆಶ್ರಯ ಪಡೆದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ