Site icon Vistara News

Rain News : ಮಳೆಗೆ ಮನೆ ಗೋಡೆ ಕುಸಿತ; 100ಕ್ಕೂ ಹೆಚ್ಚು ಕುರಿಗಳ ಸಾವು!

wall collapses due to incessant rain More than 100 sheep Dead

ಕಲಬುರಗಿ: ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ಸತತ ಮಳೆಗೆ (Rain news) ಮನೆ ಗೋಡೆ ಕುಸಿದು (wall collapses) 100ಕ್ಕೂ ಅಧಿಕ ಕುರಿಗಳು (sheep Dead) ಮೃತಪಟ್ಟಿವೆ. ಮಲ್ಲಪ್ಪ ಪೂಜಾರಿ ಮತ್ತು ಅಣ್ಣಪ್ಪ ಪೂಜಾರಿ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ತೇವಗೊಂಡಿದ್ದ ಗೋಡೆ ಏಕಾಏಕಿ ಕುಸಿದ ಪರಿಣಾಮ ಕಲ್ಲಿನಡಿ ಸಿಲುಕಿ ಕುರಿಗಳು ಜೀವ ಬಿಟ್ಟಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಭಾರಿ ಮಳೆಗೆ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ

ಭಾರೀ ಮಳೆಗೆ ಹಳ್ಳದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದಲ್ಲಿ ಘಟನೆ ನಡೆದಿದೆ. ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಕಳೆದ ವರ್ಷ ಇದೇ ಹಳ್ಳದಲ್ಲಿ ದಾಟುವಾಗ ನಾಲ್ವರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಹಳ್ಳ ದಾಟಲು ಸೇತುವೆ ನಿರ್ಮಾಣ ಕಾರ್ಯ ಮಾಡಲಾಗುತ್ತಿದ್ದು, ವಾಹನ ಸವಾರರಿಗಾಗಿ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ತಡರಾತ್ರಿ ಸುರಿದ ಮಳೆಗೆ ತಾತ್ಕಾಲಿಕ ಸೇತುವೆಯೇ ಕಾಣದಂತಾಗಿದೆ. ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು.

ಇದನ್ನೂ ಓದಿ: Weather report : ಬೆಂಗಳೂರು ಸೇರಿ ಹಲವೆಡೆ ಬಿರುಗಾಳಿ ಸಹಿತ ಮಳೆ!

ವರುಣನ ಅರ್ಭಟಕ್ಕೆ ಸಂಪೂರ್ಣ ಹದಗೆಟ್ಟ ರಸ್ತೆ,

ಯಾದಗಿರಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ವರುಣನ ಅಬ್ಬರ ಜೋರಾಗಿದೆ. ವರುಣನ ಅರ್ಭಟಕ್ಕೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದೋರನಹಳ್ಳಿಯ ರಾಜ್ಯ ಹೆದ್ದಾರಿಯಲ್ಲಿ ತಗ್ಗು ಗುಂಡಿ ಬಿದ್ದು ಮಳೆ ನೀರು ಸಂಗ್ರಹವಾಗಿದ್ದು, ವಾಹನ ಸಂಚಾರಕ್ಕೆ ಕಂಟಕವಾಗಿದೆ. ತಡೆಗೋಡೆ ಇಲ್ಲದ ಕಾರಣಕ್ಕೆ ದೋರನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ಶಾಲಾ ಮುಖ್ಯ ಗೇಟ್ ಬಳಿ ತಗ್ಗು ಗುಂಡಿ ಬಿದ್ದಿದೆ. ತಗ್ಗು ಗುಂಡಿಯಲ್ಲಿಯೇ ಮಕ್ಕಳು ಶಾಲೆಗೆ ಹೋಗುತ್ತಿರುವ ಚಿತ್ರಣ ಕಂಡು ಬಂತು.

ಮೈದುಂಬಿ ಧುಮ್ಮಿಕ್ಕುತ್ತಿರುವ ಕಬ್ಬರಗಿ ಜಲಪಾತ

ಕೊಪ್ಪಳ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾದ ಹಿನ್ನೆಲೆ ಕಬ್ಬರಗಿಯ ಕಪಿಲೆಪ್ಪ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಏಕೈಕ ಜಲಪಾತ ಎಂಬ ಖ್ಯಾತಿಯ ಕಪಿಲೆಪ್ಪ ಜಲಪಾತ ಸುಮಾರು 40 ಅಡಿಯಿಂದ ಧುಮ್ಮಿಕ್ಕುತ್ತಿದೆ. ಈ ಬಾರಿ ಎರಡನೆಯ ಭಾರಿ ಜಲಪಾತ ಧುಮ್ಮಿಕ್ಕುತ್ತಿದ್ದು, ಮಳೆಗಾಲದಲ್ಲಿ ಪಿಕನಿಕ್ ಸ್ಪಾಟಾಗಿದೆ.

ರೈತರಿಗೆ ವರುಣರಾಯನ ಕೃಪೆ

ಚಿಕ್ಕೋಡಿಯಲ್ಲಿ ಮಳೆರಾಯನ ಅಬ್ಬರ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆಗಾಗಿ ಕಾಯುತ್ತಿದ್ದ ರೈತರಿಗೆ ವರುಣರಾಯ ಕೃಪೆ ತೋರಿದ್ದಾನೆ. ಚಿಕ್ಕೋಡಿ, ರಾಯಬಾಗ, ಕಾಗವಾಡ, ಹುಕ್ಕೇರಿ ತಾಲೂಕಿನಲ್ಲಿ ಸೋಮವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version