ಬೆಳಗಾವಿ : ಬೆಳಗಾವಿಯಲ್ಲಿ ಸತತ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಮಳೆಯು ನಾನಾ ಅವಾಂತರವನ್ನೇ ಸೃಷಿ ಮಾಡುತ್ತಿದೆ. ಕೆಲವು ಕಡೆ ಮಳೆಗೆ ಮರಗಳು ಧರೆಗುರುಳಿದ್ದು, ಹಲವು ಕಡೆ ಮನೆಗಳ ಚಾವಣಿ ಕುಸಿಯುತ್ತಿದೆ. ಸದ್ಯ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಮಲ್ಲಾಪೂರ ಗ್ರಾಮದ ಶಾಲೆಯಲ್ಲಿ ಮಳೆ ಬಂದರೆ ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಆತಂಕ ಹೆಚ್ಚಾಗುತ್ತದೆ.
ಜ್ಞಾನ ದೇಗುಲಕ್ಕೆ ಮಕ್ಕಳು ಬರಬೇಕಾದರೆ ಪುಸ್ತಕದೊಂದಿಗೆ ಬಕೆಟ್‌ವೊಂದನ್ನು ತರಬೇಕು. ಯಾಕೆಂದರೆ ಮಳೆಗಾಲ ಬಂದರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರು ಸೋರುತ್ತದೆ. ಶಾಲೆಯಲ್ಲಿ ಒಟ್ಟು 260 ಮಕ್ಕಳಿದ್ದು, 10 ಕೊಠಡಿಗಳ ಪೈಕಿ ಮೂರೇ ಮೂರು ಕೊಠಡಿಗಳು ಸರಿಯಾಗಿವೆ. ಶಾಲೆಯಲ್ಲಿ ಶಿಕ್ಷಕರು ಕೊಠಡಿಯಲ್ಲಿ ಬಕೆಟ್ ಇಟ್ಟು ಪಾಠ ಮಾಡುವಂತಾಗಿದೆ.
ಇತ್ತ ಕೂಡಲೇ ಶಾಲೆ ರಿಪೇರಿ ಮಾಡಿಸದೇ ಹೋದರೆ ಬಿಇಒ ಕಚೇರಿಗೆ ಬೀಗ ಹಾಕುವ ಎಚ್ಚರಿಕೆಯನ್ನು ಪೋಷಕರು ನೀಡಿದ್ದಾರೆ. ಕೊಠಡಿಯಲ್ಲಿ ನೀರು ಸೋರಿಕೆ ಒಂದುಕಡೆಯಾದರೆ, ಕುಸಿಯುವ ಭೀತಿಯು ಇದೆ. ಹೀಗಾಗಿ ಶಾಲಾ ಮಕ್ಕಳು ಪ್ರಾಣ ಭಯದಲ್ಲಿಯೇ ಪಾಠ ಕೇಳುವಂತಾಗಿದೆ. ಕೂಡಲೇ ಶಾಲೆಯ ಕೊಠಡಿಗಳನ್ನು ರಿಪೇರಿ ಮಾಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬೃಂದಾವನಕ್ಕೂ ನುಗ್ಗಿದ ನೀರು
ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜಯತೀರ್ಥರ ಮೂಲ ಬೃಂದಾವನಕ್ಕೂ ಮಳೆ ನೀರು ನುಗ್ಗಿದೆ. ಸೇಡಂ ತಾಲೂಕಿನ ಮಳಖೇಡದಲ್ಲಿರುವ ಜಯತೀರ್ಥರ ಬೃಂದಾವನ ಮಠದ ಪಕ್ಕದಲ್ಲಿ ಕಾಗಿಣಾ ನದಿ ಇದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ಮಠಕ್ಕೂ ನೀರು ನುಗ್ಗಿದೆ. ಮಳೆಯ ಮಧ್ಯೆಯೂ ಜಯತೀರ್ಥರ ಬೃಂದಾವನಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ.
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ
ಕೊಡಗು ಜಿಲ್ಲೆಯಲ್ಲಿ ಗಾಳಿಮಳೆ ಮನೆಯ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ವಿಕ್ರಂ ಬಡಾವಣೆಯ ನಿವಾಸಿ ವಸಂತಿ ಅವರ ಮನೆಯ ಮೇಲೆ ಮರವೊಂದು ಬಿದ್ದಿದೆ. ಶುಕ್ರವಾರ ಮುಂಜಾನೆ 3.30 ಗಂಟೆಯ ಸುಮಾರಿಗೆ ಭಾರಿ ಗಾಳಿ ಮಳೆಗೆ ಮರ ಉರುಳಿದೆ. ಅದೃಷ್ಟವಾಶತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಮರ ಬಿದ್ದ ಪರಿಣಾಮ ಅಡುಗೆ ಕೋಣೆ, ಶೌಚಾಲಯಕ್ಕೆ ಹಾನಿ ಆಗಿದೆ. ಮನೆಯ ಪಕ್ಕ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Rain News : ಸತತ ಮಳೆಗೆ ಶೌಚಾಲಯ ಚಾವಣಿ ಕುಸಿತ; ಮೂವರು ಮಹಿಳೆಯರಿಗೆ ಗಾಯ
ನಿರಂತರ ಮಳೆಗೆ ಕುಸಿದ ನೆಲ
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಭಾರಿ ಮಳೆಗೆ ಭೂಮಿ ಕುಸಿದಿದೆ. ಈಶ್ವರ ಕಬ್ಬೂರ ಎನ್ನುವವರ ಮನೆ ಎದುರು ರಾತ್ರಿ ನೆಲ ಕುಸಿದಿದೆ. ಹಲವು ವರ್ಷಗಳ ಹಿಂದೆ ಧಾನ್ಯಗಳನ್ನು ಇಡಲು ಹಗೆಗಳನ್ನು ಬಳಸಲಾಗುತ್ತಿತ್ತು. ಇದೀಗ ಮುಚ್ಚಿದ ಹಗೆ ಕುಸಿದು ಜನರಲ್ಲಿ ಆತಂಕ ಮೂಡಿದೆ.
ರಸ್ತೆಗಳು ಜಲಾವೃತ
ಯಾದಗಿರಿಯಲ್ಲಿ ನಿರಂತರ ಮಳೆಗೆ ನಗರದ ರಸ್ತೆಗಳು ನದಿಯಂತಾಗಿದೆ. ಲಕ್ಷ್ಮಿ ನಗರ, ಮಾತಾ ಮಾಣಿಕೇಶ್ವರಿ ನಗರ ಸೇರಿದಂತೆ ಅನೇಕ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ನಗರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಲಕ್ಷ್ಮಿ ನಗರದ ಸರಕಾರಿ ಶಾಲೆಯೊಳಗೂ ನೀರು ನುಗ್ಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಿಇಒ ಮಕ್ಕಳಿಗೆ ರಜೆಯನ್ನು ನೀಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ