Site icon Vistara News

Rain News | ಗುರ್ಜಾಪುರ ಬ್ಯಾರೇಜ್‌ನಲ್ಲಿ ತೆರೆಯದ 105 ಕ್ರೆಸ್ಟ್ ಗೇಟ್; ಜಮೀನಿಗೆ ನುಗ್ಗಿದ ನೀರು

ಗುರ್ಜಾಪುರ

ರಾಯಚೂರು: ಜಿಲ್ಲೆಯ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ತಾಂತ್ರಿಕ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ತೆಗೆಯಲು ಸಾಧ್ಯವಾಗದ ಪರಿಣಾಮ ಇನ್ನೂ ೧೦೫ ಗೇಟ್‌ಗಳ ತೆರವಿಗೆ ಕಸರತ್ತು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾರೇಜ್‌ನಿಂದ ನೀರು ಹೊರಬಿಡಲು ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಬ್ಯಾರೇಜ್ ಗೇಟ್‌ಗಳನ್ನು ತೆರೆಯುವ ಕಾರ್ಯಾಚರಣೆ 5ನೇ ದಿನಕ್ಕೆ ಕಾಲಿಟ್ಟಿದೆ.

ಬ್ಯಾರೇಜ್‌ ಒಟ್ಟು 194 ಗೇಟ್‌ಗಳ ಪೈಕಿ 99 ಗೇಟ್‌ಗಳು ಮಾತ್ರ ಓಪನ್ ಆಗಿದ್ದು, ಇನ್ನುಳಿದ 105 ಗೇಟ್‌ಗಳನ್ನು ತೆರೆಯಲು ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಗೇಟ್‌ ಓಪನ್ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದರಿಂದ ಸೋಮವಾರವಾರವೂ ಪ್ರಯತ್ನ ಮುಂದುವರಿದಿದೆ. ಕೇರಳದ ನುರಿತ ಡೈವಿಂಗ್ ತಂಡದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಪ್ರಸ್ತುತ ನಾರಾಯಣಪುರ ಜಲಾಶಯದಿಂದ 1.73 ಲಕ್ಷ ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಗುರ್ಜಾಪುರ ಬ್ಯಾರೇಜ್‌ಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿರುವುದರಿಂದ ಒತ್ತಡ ಹೆಚ್ಚಾಗಿದೆ. ಗೇಟ್‌ ತೆರೆಯುವಲ್ಲಿ ವಿಳಂಬವಾಗಿ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಅಧಿಕಾರಿಗಳಿಗೆ ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಬ್ಯಾರೇಜ್‌ ಅಕ್ಕಪಕ್ಕದ ಗುರ್ಜಾಪುರ, ಅರಷಿಣಿಗಿ ಹಾಗೂ ತಿಮ್ಮಾಪುರ ಜಮೀನಿಗೆ ನೀರು ನುಗಿದ್ದು, ಸ್ಥಳೀಯರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ ಈ ಅವಾಂತರ ಸೃಷ್ಟಿಯಾಗಿದ್ದು, ಜಮೀನುಗಳಲ್ಲಿ ಮೊಸಳೆ, ವಿಷ ಜಂತುಗಳು ಕಾಣಿಸಿಕೊಳ್ಳುತ್ತಿವೆ ಎಂದು ರೈತರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ತುಂಗಭದ್ರಾ ಜಲಾಶಯದ 21ನೇ ಗೇಟ್‌ನಲ್ಲೂ ತಾಂತ್ರಿಕ ತೊಂದರೆ

ತುಂಗಭದ್ರಾ ಜಲಾಶಯದ 21ನೇ ಗೇಟ್‌ನಲ್ಲಿ ನೀರಿನ ಹರಿವು ನಿಂತಿದೆ.

ವಿಜಯನಗರ: ತುಂಗಭದ್ರಾ ಜಲಾಶಯದ 21ನೇ ಗೇಟ್‌ನಲ್ಲಿ ತಾಂತ್ರಿಕ ತೊಂದರೆಯಾಗಿದ್ದು, 10 ದಿನಗಳೊಳಗೆ ಗೇಟ್‌ ದುರಸ್ತಿ ಮಾಡಲಾಗುವುದು. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ತುಂಗಭದ್ರಾ ಜಯಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ನಾಗಮೋಹನ್ ತಿಳಿಸಿದ್ದಾರೆ.

ನೀರು ಹೊರಬಿಡಲು ಅವಶ್ಯಕತೆ ಬಿದ್ದರೆ ಮ್ಯಾನುವಲ್ ಆಗಿ ಗೇಟ್‌ ಬಳಸಲು ಅವಕಾಶವಿದೆ. 6.50 ಲಕ್ಷ ಕ್ಯೂಸೆಕ್ ನೀರನ್ನು ಒಮ್ಮೆಲೆ ಬಿಟ್ಟಾಗ ಮಾತ್ರ ಇರುವ 33 ಗೇಟ್‌ಗಳ ಅವಶ್ಯಕತೆಯಿದೆ. ಪ್ರಸ್ತುತ 1.88 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. 1.50 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಹೀಗಾಗಿ ಸದ್ಯಕ್ಕಂತೂ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Rain news | ನೆರೆಯಿಂದ ನಲುಗಿದ ಹೊನ್ನಾವರ ತಾಲೂಕಿನ ಮಾವಿನಕುರ್ವಾ

Exit mobile version