Site icon Vistara News

Rain news : ವಿಜಯಪುರದಲ್ಲಿ ಕೈ ಕೊಟ್ಟ ಮುಂಗಾರು; ಗೊಂಬೆಗೆ ಮದುವೆ ಮಾಡಿಸಿದ ಮಕ್ಕಳು

Doll marrige

ವಿಜಯಪುರ: ಮುಂಗಾರು ಕರಾವಳಿ ಪ್ರವೇಶಿಸಿದರೂ ಒಳನಾಡಿನಲ್ಲಿ ಮಳೆಯ (Rain News) ಸುಳಿವೇ ಇಲ್ಲದಂತಾಗಿದೆ. ಅದರಲ್ಲೂ ಉತ್ತರ ಒಳನಾಡಿನಲ್ಲಿ ಮಳೆಯಿಲ್ಲದೆ ಹಲವು ಕಡೆಗಳಲ್ಲಿ ಜಲಕ್ಷಾಮ ಎದುರಾಗಿದೆ. ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ನಡುವೆ ಮಳೆ ಬರಲಿ ಎಂದು ಹಲವು ಕಡೆ ವಿವಿಧ ರೀತಿಯಲ್ಲಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ.

ಮಕ್ಕಳ ಕೈನಲ್ಲಿ ಗೊಂಬೆ ಮದುವೆ ಮಾಡಿಸಿದ ಗ್ರಾಮಸ್ಥರು

ಕೆಲವರು ಕಪ್ಪೆಗಳಿಗೆ ಮದುವೆ ಮಾಡಿದರೆ, ಮತ್ತೆ ಕೆಲವರು ಕತ್ತೆಗಳಿಗೆ ಮದುವೆ ಮಾಡಿ ವರುಣ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಮತ್ತೆ ಕೆಲವರು ದೇವರಿಗೆ ಅಭ್ಯಂಜನ ಸೇವೆ ಮಾಡಿದರೆ, ಬೆಳಗಾವಿಯಲ್ಲಿ ಮುಸ್ಲಿಂ ಸಮುದಾಯದವರು (Muslims Community) ಸಾಮೂಹಿಕ ಪ್ರಾರ್ಥನೆ ಮಾಡಿ, ಕಣ್ಣೀರ ಮೂಲಕ ಮಳೆ ಬರಲಿ ಎಂದು ಅಲ್ಲಾ ಬಳಿ ಬೇಡಿಕೊಂಡಿದ್ದರು. ಇದೀಗ ವಿಜಯಪುರದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರಿಂದ್ರಾಳ ಗ್ರಾಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಮಕ್ಕಳ ಕೈಯಲ್ಲಿ ಗೊಂಬೆಗಳಿಗೆ ಮದುವೆ ಮಾಡಿಸಿ ಮಳೆರಾಯನಿಗಾಗಿ ಪ್ರಾರ್ಥಿಸಿದ್ದಾರೆ. ಮನುಷ್ಯರಿಗೆ ಯಾವ ರೀತಿ ಮದುವೆ ಸಮಯದಲ್ಲಿ ಶಾಸ್ತ್ರಗಳನ್ನು ಮಾಡಲಾಗುತ್ತದೆಯೋ ಹಾಗೆ ಮಕ್ಕಳ ಕೈಯಲ್ಲಿ ಗೊಂಬೆಗಳಿಗೆ ಮದುವೆ ಮಾಡಿಸಲಾಗುತ್ತದೆ. ಮದುವೆಗೆ ಬಂದವರಿಗೆಲ್ಲ ಭೂರಿ ಭೋಜನವನ್ನು ಹಾಕಿಸಲಾಗಿತ್ತು. ಗೊಂಬೆಗಳಿಗೆ ಮದುವೆ ಮಾಡಿ ಮಳೆಗೆ ಪ್ರಾರ್ಥಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಿಗೆ ಇದೆ.

ಮಳೆಗಾಗಿ ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ

ಬೆಳಗಾವಿಯಲ್ಲಿ ಮುಸ್ಲಿಂ ಸಮುದಾಯದವರು (Muslims Community) ಸಾಮೂಹಿಕ ಪ್ರಾರ್ಥನೆ ಮಾಡಿದ್ದು, ಕಣ್ಣೀರ ಮೂಲಕ ಮಳೆ ಬರಲಿ ಎಂದು ಅಲ್ಲಾ ಬಳಿ ಬೇಡಿಕೊಂಡಿದ್ದಾರೆ. ಮಳೆ ಬಾರದೇ ಇದ್ದರೆ ಸಂಕಷ್ಟ ಎದುರಾಗಲಿದೆ. ಇಷ್ಟು ದಿನವಾದರೂ ಮಳೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ದೇವರೇ ನೀನೇ ಕಾಪಾಡು, ದಾರಿ ತೋರು, ಮಳೆ ಬರುವಂತೆ ಮಾಡು. ಇದಕ್ಕಾಗಿ ನಾವು ನಮ್ಮ ಕಣ್ಣೀರನ್ನು ನಿನಗೆ ಅರ್ಪಿಸುತ್ತೇವೆ. ನೀನು ನಮಗೆ ಮಳೆ ಕರುಣಿಸು ಎಂದು ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬೆಳಗಾವಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಸ್ಲಿಂ ಧರ್ಮಗುರು ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದ್ದು, ‘ಅಲ್ಹಾ ಮಳೆ ಕರುಣಿಸು’ ಎಂದು ಸಾಮೂಹಿಕವಾಗಿ ಕಣ್ಣೀರಿಟ್ಟಿದ್ದಾರೆ. ಬೆಳಗಾವಿ ಉತ್ತರ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಸಹ ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ: Rain News: ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಅಪ್ಪಳಿಸಿದ ಬಂಡೆಗಲ್ಲು; ಕರಾವಳಿಗಿಂದು ಆರೆಂಜ್‌ ಅಲರ್ಟ್‌

ಮೂರು ದಿನ ಪ್ರಾರ್ಥನೆ

ಮಳೆಗಾಗಿ ಶನಿವಾರದಿಂದ ಮೂರು ದಿನಗಳ ಕಾಲ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅಂದರೆ, ಶನಿವಾರ ಮಳೆಯಾಗದೇ ಇದ್ದರೆ, ಪುನಃ ಭಾನುವಾರ ಬೆಳಗ್ಗೆ 9.30ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಹೀಗೆ ದೇವರ ಮೊರೆ ಹೋಗುವ ಮೂಲಕ ನಾಡಿನಲ್ಲಿ ಮಳೆಯಾಗಿ ಸುಭಿಕ್ಷವಾಗಲಿ ಎಂದು ಕೋರಿಕೊಳ್ಳಲಾಗುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version