ಕಾರವಾರ : ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಗೆ (costal rain) ಜನರು ನಲುಗಿ ಹೋಗಿದ್ದಾರೆ. ಬಿರುಗಾಳಿ ಸಹಿತ ಭಾರಿ ಮಳೆ ಒಂದು ಕಡೆಯಾದರೆ, ಮಳೆಯಿಂದ ಆಗುತ್ತಿರುವ ಹಾನಿಯಿಂದ ಹೊರಬರಲು ಆಗದೇ ಜನರು ವಿಲವಿಲನೆ ಒದ್ದಾಡುವಂತೆ ಮಾಡಿದೆ. ವ್ಯಾಪಕ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿನ ರಸ್ತೆಗಳು ಪ್ರವಾಹಕ್ಕೆ ಸಿಲುಕಿವೆ. ಸೇತುವೆ ಮುಳುಗಡೆಯಾದ ಪರಿಣಾಮ ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.
ಕಾತೇಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಪ್ಪರ್ ಕನೇರಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದ ಪರಿಣಾಮ ಹಿನ್ನೀರಿನ ಪ್ರದೇಶದಲ್ಲಿರುವ ಕುಂಡಲ್ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಗ್ರಾಮದ ಜನರು ಹೊರಬರಲು ಸಾಧ್ಯವಾಗದೇ ಪರದಾಡುವಂತಾಗಿದೆ. ತಾಲೂಕಾಡಳಿತದಿಂದ ನೀಡಲಾಗಿದ್ದ ಬೋಟ್ ಸಹಾಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು ರೋಗಿಗಳು ಸೇರಿದಂತೆ ಹಲವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಜಲಾಶಯ ಭರ್ತಿಯಾದ ಹಿನ್ನೆಲೆ ಹಿನ್ನೀರಿನ ಪ್ರದೇಶದಲ್ಲಿರುವ ಕುಂಡಲ್, ಕುರಾವಲಿ, ನವರ, ಆಂಬಾಳ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಂತಾಗಿದೆ.
ಜೋಡಿಯಾ ರಸ್ತೆಯಲ್ಲಿ ಗುಡ್ಡ ಕುಸಿತ
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಅಣಶಿ ಘಟ್ಟದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಪಕ್ಕದಲ್ಲೇ ಗುಡ್ಡ ಕುಸಿದಿದೆ. ಜೋಯಿಡಾ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿತದಿಂದಾಗಿ ಜನರಲ್ಲಿ ಆತಂಕ ಹೆಚ್ಚಿಸಿದೆ. ಕಾರವಾರದಿಂದ ಜೋಯಿಡಾ, ದಾಂಡೇಲಿ, ಹಳಿಯಾಳ, ಬೆಳಗಾವಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಇದಾಗಿದೆ. ಭಾರೀ ಮಳೆಗೆ ರಸ್ತೆಗೆ ಧರೆಯ ಕಲ್ಲುಗಳು ಬಿದ್ದಿವೆ. ಕಳೆದ ಬಾರಿ ಅಣಶಿ ಘಟ್ಟದಲ್ಲಿ ಭೂಕುಸಿತದಿಂದ ತಿಂಗಳ ಕಾಲ ಹೆದ್ದಾರಿ ಸಂಚಾರ ಬಂದ್ ಆಗಿತ್ತು. ಮತ್ತೆ ಗುಡ್ಡ ಕುಸಿತ ಉಂಟಾಗುತ್ತಿರುವುದಕ್ಕೆ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುವ ಆತಂಕ ಇದೆ.
ಇತ್ತ ಕುಮಟಾದ ಉಪ್ಪಿನ ಗಣಪತಿ ದೇವಸ್ಥಾನ ಬಳಿ ಭಾರೀ ಗಾಳಿ ಮಳೆಗೆ ಮನೆ ಮೇಲೆ ಆಲದ ಮರವೊಂದು ಉರುಳಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗಾಧರ ಗೌಡ ಹಾಗೂ ಗಣೇಶ ಗೌಡ ಎಂಬುವವರ ಮನೆ ಮೇಲೆ ಬೃಹತ್ ಆಲದ ಮರ ಬಿದ್ದಿದೆ. ಗಣೇಶ ಗೌಡ ಅವರ ಮನೆ ಭಾಗಶಃ ಹಾನಿ ಆಗಿದೆ. ಮರ ಬಿದ್ದ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳೆಗೆ ಉದುರಿ ಬೀಳುತ್ತಿರುವ ದಾಳಿಂಬೆ
ವಿಜಯನಗರ ಜಿಲ್ಲೆಯಲ್ಲಿ ನಿರಂತರ ಜಿಟಿಜಿಟಿ ಮಳೆಯಿಂದಾಗಿ ದಾಳಿಂಬೆ ಬೆಳೆಗಾರರ ಬದುಕು ಹೈರಾಣಾಗಿದೆ. ನಿರಂತ ಮಳೆಗೆ ಗಿಡದಲ್ಲಿ ಹಣ್ಣಾಗದೇ ದಾಳಿಂಬೆ ಉದುರಿ ಬೀಳುತ್ತಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಸುನೀಲ್ ಸೇರಿ ಹತ್ತಾರು ದಾಳಿಂಬೆ ಬೆಳೆಗಾರರ ಸ್ಥಿತಿ ಹೇಳತೀರದಾಗಿದೆ. ಬಿಟ್ಟುಬಿಡದೆ ಬರುತ್ತಿರುವ ಮಳೆಯಿಂದಾಗಿ ದಾಳಿಂಬೆ ಬಿರುಕು ಬಿಡುತ್ತಿವೆ. ಕೈಗೆ ಬಂದ ತುತ್ತು ಮಳೆಯಿಂದಾಗಿ ಬಾಯಿಗೆ ಬಾರದ ರೀತಿ ಆಗಿದೆ.
ಕೋರ್ಪಲಯ್ಯ ಛತ್ರ ಬಹುಭಾಗ ಮುಳುಗಡೆ
ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ತುಂಗಾ ಜಲಾಶಯದ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಜಲಾಶಯದ 21 ಗೇಟುಗಳನ್ನು ತೆರೆಯಲಾಗಿದೆ. ಭಾರಿ ಮಳೆಗೆ ನಗರದ ಕೋರ್ಪಲಯ್ಯ ಛತ್ರ ಬಹುಭಾಗ ಮುಳುಗಡೆ ಆಗಿದೆ. ಇನ್ನೊಂದು ಅಡಿಯಷ್ಟು ನೀರು ಏರಿಕೆಯಾದರೆ ಮಂಟಪ ಜಲಾವೃತಗೊಳ್ಳಲಿದೆ.
ನೇತ್ರಾವತಿ ನದಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಧರ್ಮಸ್ಥಳದ ನೇತ್ರಾವತಿ ನದಿಯು ಭೋರ್ಗರೆದು ಹರಿಯುತ್ತಿದೆ. ನದಿ ನೀರಿನ ಮಟ್ಟ ಏರಿಕೆ ಹಿನ್ನೆಲೆ ನೇತ್ರಾವತಿ ಸ್ನಾನ ಘಟ್ಟ ಮುಳುಗಡೆಯಾಗುವ ಭೀತಿ ಇದೆ. ಈಗಾಗಲೇ ಭಕ್ತರಿಗೆ ನದಿಗಿಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ವಾರಾಂತ್ಯ ಹಿನ್ನೆಲೆ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ನದಿಗಿಳಿಯದಂತೆ ಎಚ್ಚರಿಕೆ ಇದ್ದರೂ ಯಾತ್ರಿಗಳು ಉದಾಸೀನ ತೋರುತ್ತಿದ್ದಾರೆ.
ಇತ್ತ ಕಡಬ ಪಂಜ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವು ಸ್ಥಗಿತಗೊಂಡಿದೆ. ಪುಳಿಕುಕ್ಕು ಎಂಬಲ್ಲಿ ರಸ್ತೆಗೆ ನೆರೆನೀರು ಹರಿದು ಬಂದಿದೆ. ಸುಳ್ಯ ತಾಲೂಕಿಗೆ ಸಂಚಾರಿಸಲು ಬದಲಿ ಮಾರ್ಗ ಎಡಮಂಗಲ ಮೂಲಕ ತೆರಳಲು ತಹಸೀಲ್ದಾರ್ ಮನವಿ ಮಾಡಿದ್ದಾರೆ. ಜತೆಗೆ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟವು ಮುಳುಗಡೆ ಆಗಿದೆ.
ಅಂಬಲಿಕೊಪ್ಪ ಸೇತುವೆ ಮುಳುಗಡೆ
ಧಾರವಾಡದಲ್ಲಿ ಮಳೆ ಅಬ್ಬರ ಹಿನ್ನೆಲೆ ಬೆಡ್ತಿ ಹಳ್ಳ ಉಕ್ಕಿ ಹರಿಯುತ್ತಿದೆ. ಅಂಬಲಿಕೊಪ್ಪ ಬಳಿಯ ಸೇತುವೆ ಮುಳುಗಡೆಯಾಗಿದ್ದು, ಇದರಿಂದಾಗಿ ಅಂಬಲಿಕೊಪ್ಪ-ಡೊಂಬರಿಕೊಪ್ಪ ಸಂಚಾರ ಬಂದ್ ಆಗಿದೆ. ಸಂಚಾರ ಬಂದ್ ಹಿನ್ನೆಲೆ ವಾಹನ ಸವಾರರು ಪರದಾಡುವಂತಾಗಿದೆ.
ಇದನ್ನೂ ಓದಿ: Rain News : ಕಾಫಿನಾಡಲ್ಲಿ ಮಳೆ ಅಬ್ಬರ; ಹಾನಿ ಭಯಂಕರ, ಜನ ತತ್ತರ
ಮಳೆಗೆ ಮನೆಗಳು ನೆಲಸಮ
ಬೆಳಗಾವಿಯಲ್ಲಿ ನಿರಂತರ ಮಳೆಗೆ ಎರಡು ಮನೆಗಳ ಗೋಡೆಗಳು ಬಿದ್ದಿವೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೂರಣಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಖೈರುನ್ನಿಸಾ ಹಿರೇಕೆರ್ ಮತ್ತು ಗೋಪಾಲ ತಾರೋಡಕರ್ ಎಂಬುವವರಿಗೆ ಸೇರಿದ ಮನೆಗಳು ಮಳೆಗೆ ನೆನೆದು ಗೋಡೆಗಳು ನೆಲಸಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ ದೂಧ್‌ಗಂಗಾ ನಂದಿ ಮೈದುಂಬಿ ಹರಿಯುತ್ತಿದೆ. ದೂಧ್‌ಗಂಗಾ ದಡದಲ್ಲಿದ್ದ ಮನ್ಸೂರ್‌ಅಲಿ ದರ್ಗಾ ಸಂಪೂರ್ಣ ಮುಳುಗಡೆಯಾಗಿದೆ. ಯಕ್ಸಂಬಾ ಪಟ್ಟಣದ ಮುಲ್ಲಾನ್ಕಿ ತೋಟದಲ್ಲಿರುವ ಮನ್ಸೂರ್ ಅಲಿ ದರ್ಗಾ ಕೆರೆಯಂತಾಗಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಬಂಗಾಳಿ ಬಾಬಾ ಧಾರ್ಮಿಕ ಕೇಂದ್ರ/ ದರ್ಗಾ ನಡುಗಡ್ಡೆಯಾಗಿ ಪರಿವರ್ತನೆ ಆಗಿದೆ. ಬಂಗಾಳಿ ಬಾಬಾ ಧಾರ್ಮಿಕ ಕೇಂದ್ರಕ್ಕೆ ನೀರು ಆವರಿಸಿದ ಹಿನ್ನೆಲೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಇತ್ತ ಹಾವೇರಿ ಜಿಲ್ಲೆಯಲ್ಲೂ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ವರದಾ ನದಿ ತುಂಬಿ ಹರಿಯುತ್ತಿದೆ. ಹಾವೇರಿ- ಕಳಸೂರು ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ. ಅಪಾಯದ ಮಟ್ಟ ಮೀರಿ ವರದಾ ನದಿ ನೀರು ಹರಿಯುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ