ಹಾಸನ: ರಾಜ್ಯಾದ್ಯಂತ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಮಲೆನಾಡು ಭಾಗದಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದೆ. ಇತ್ತ ಹಾಸನ ಜಿಲ್ಲೆಯಲ್ಲಿ ಮಳೆ ಅನಾಹುತಕ್ಕೆ ಮೊದಲ ಬಲಿಯಾಗಿದೆ. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದ ವೃದ್ಧೆಯೊಬ್ಬರು ಅದನ್ನು ತುಳಿದು ಮೃತಪಟ್ಟಿದ್ದಾರೆ. ಅವರ ಜತೆಗಿದ್ದ ಹಸುವೂ ಮೃತಪಟ್ಟಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ರಂಗಮ್ಮ (60) ಮೃತ ದುರ್ದೈವಿ. ಭಾರಿ ಗಾಳಿ, ಮಳೆಯಿಂದ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದಿದೆ. ಆದರೆ, ಇದನ್ನು ಯಾರೂ ಗಮನಿಸಿರಲಿಲ್ಲ. ಈ ವೇಳೆ ಹೊಲಕ್ಕೆ ಹೋಗಿ ಹಸುವಿನ ಜತೆ ವಾಪಸಾಗುತ್ತಿದ್ದ ಮಹಿಳೆಯು ಮನೆಯತ್ತ ಹೊರಟಿದ್ದರು. ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಯಾವುದೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಅವರು ಮೃತಪಟ್ಟಿದ್ದಾರೆ.
ಒಂದು ವರ್ಷದ ಹಿಂದೆ ಇದೇ ಜಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರಂಗಮ್ಮ ಬಾವಮೈದುನ ಯಜಮಾನ್‌ಗೌಡ ಎಂಬುವವರು ಮೃತಪಟ್ಟಿದ್ದರು. ತಂತಿ ಬೀಳುವಂತಿದೆ ದುರಸ್ತಿ ಮಾಡುವಂತೆ ಒಂದು ತಿಂಗಳಿನಿಂದ ಚೆಸ್ಕಾಂ ಸಿಬ್ಬಂದಿಗೆ ಬಳ್ಳೂರು ಗ್ರಾಮಸ್ಥರು ಮನವಿ ಮಾಡಿದ್ದರು.
ಸ್ಥಳಕ್ಕೆ ಆಗಮಿಸಿ ವಿದ್ಯುತ್ ತಂತಿ ದುರಸ್ತಿ ಮಾಡದ ವಿದ್ಯುತ್ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಹಿಳೆ ಹಾಗೂ ಹಸು ಬಲಿಯಾದಂತಾಗಿದೆ ಎಂದು ಆರೋಪ ಮಾಡಲಾಗಿದೆ.
ಇದನ್ನೂ ಓದಿ: Karnataka Budget 2023 : ಏನೂ ಇಲ್ಲದ ಬಜೆಟ್; ಬಿ ವೈ ವಿಜಯೇಂದ್ರ ಟೀಕೆ
ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮೃತ ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರ ಒತ್ತಾಯ ಮಾಡಲಾಗಿದೆ. ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಜೆಟ್ ಸುದ್ದಿಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ