ಬೆಂಗಳೂರು : ಶುಕ್ರವಾರ ರಾತ್ರಿ (ಜೂನ್ 17) ಸುರಿದ ಭಾರಿ ಮಳೆಯಿಂದಾಗಿ ನಗರದಲ್ಲಿ ಅವಾಂತರ ಸೃಷ್ಟಿಯಾಗಿದೆ. ನಗರದ 8 ವಲಯದಲ್ಲಿ ಅಲ್ಲ್ಲಲ್ಲಿ ಮಳೆಯಿಂದ ಭಾರಿ ಅನಾಹುತವಾಗಿದೆ. ಕೆ.ಆರ್.ಪುರಂನ ಶ್ರೀ ಕೃಷ್ಣ ಚಿತ್ರ ಮಂದಿರದ ಪಾರ್ಕ್ ಮಾಡಿದ್ದ ಜಾಗದ ತಡೆಗೋಡೆ ಕುಸಿದು ಸುಮಾರು 20ಕ್ಕೂ ಹೆಚ್ಚು ಬೈಕ್‌ಗಳು ಹಾನಿಗೊಳಗಾಗಿವೆ.
ಕೆಲವರು ಬೈಕ್‌ನಲ್ಲಿ ಮನೆ ಕೀ ಇಟ್ಟು ಸಿನಿಮಾ ನೋಡಲು ಹೋಗಿದ್ದರು. ಬೈಕ್‌ಗಳ ಮೇಲೆ ತಡೆಗೋಡೆ ಬಿದ್ದ ಪರಿಣಾಮ ಇತ್ತ ಮನೆ ಕೀ ಇಲ್ಲದೆ ಜನರು ಪರದಾಡಿದ್ದಾರೆ. ಥಿಯೇಟರ್ ಮಾಲೀಕರು ಸ್ಥಳಕ್ಕೆ ಬರಬೇಕು ಹಾಗೂ ಮಾಲೀಕರು ತಮಗೆ ಪರಿಹಾರ ಕೊಡಬೇಕೆಂದು ಬೈಕ್ ಮಾಲೀಕರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಕೆ.ಆರ್. ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | ಬೆಂಗಳೂರಲ್ಲಿ ಭಾರೀ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿಹೋದ ಯುವಕ, ಗೋಡೆ ಕುಸಿದು ಮಹಿಳೆ ಬಲಿ
ಕೆರೆ ಓವರ್ ಫ್ಲೋ
ಎಂಎಸ್ ಪಾಳ್ಯ ಬಳಿ ಇರುವ ಸಿಂಗಾಪುರ ಕೆರೆ ಓವರ್ ಫ್ಲೋ ನಿಂದಾಗಿ ರಸ್ತೆಗೆ ನೀರು ನುಗ್ಗಿದೆ. ಕೆರೆ ನೀರು ತುಂಬಿದರೆ ಆ ನೀರು ಹೋಗಲು ಈ ಹಿಂದೆ ಎರಡು ಕೆರೆಗಳಿದ್ದವು. ಈಗ ನೀರು ಓವರ್ ಫ್ಲೋ ಆಗಿ ಹೊರ ಹೋಗುವ ಸ್ಥಳದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣವಾಗಿದೆ. ಹೀಗಾಗಿ ರಸ್ತೆಗೆ ನೀರು ನುಗ್ಗಿ ಓವರ್ ಫ್ಲೋ ಆಗಿದೆ.
ಮಳೆಯಿಂದಾಗಿ ನಾಗಾವಾರದ ಎನ್. ಜಿ. ಲೇಔಟ್ ಸಂಪೂರ್ಣ ಜಲಾವೃತಗೊಂಡಿದೆ. ಲೇಔಟ್‌ನಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಖಾಸಗಿ ಶಾಲೆಗಳಿಗೂ ನೀರು ನುಗ್ಗಿದ ಪರಿಣಾಮ ಶಾಲಾ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದೆ.
ಮಳೆಯಿಂದ ಕೆರೆಯಂತಾದ ರಸ್ತೆಗಳು
ಬೆಂಗಳೂರಿನಲ್ಲಿ ಮುಂಜಾನೆವರೆಗೂ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ಪೂರ್ವ ವಿಭಾಗದಲ್ಲಿ ರಸ್ತೆಗಳು ಕೆರೆಯಂತಾಗಿದೆ. ರಾಮಮೂರ್ತಿನಗರ ಕೆ. ಆರ್. ಪುರಂ ಕಲ್ಕೇರೆ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರ ಆಕ್ರೋಶ ಹೊರಹಾಕುತ್ತಿದ್ದಾರೆ.
ಮನೆಗೆ ನೀರು ತುಂಬಿದ ಕಾರಣ ರಾತ್ರಿ ಪೂರ್ತಿ ಸಾರ್ವಜನಿಕರು ಪರದಾಡುವಂತಾಗಿದ್ದು ಇಷ್ಟೆಲ್ಲ ಅವಾಂತರ ಆದರೂ ತಿರುಗಿ ನೋಡದ ಬಿಬಿಎಂಪಿ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಹೆಚ್ಎಎಲ್ ಬಳಿ ಕಾಂಪೌಡ್ ಗೋಡೆ ಕುಸಿತ
ವಿನಾಯಕ್ ನಗರದ ಬಳಿ ಕಾಂಪೌಡ್ ಕುಸಿದು ಒಂದು ಕಾರು ಜಖಂ ಗೊಂಡಿದೆ. ವಿನಾಯಕ್ ನಗರದ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿದೆ. ರಾತ್ರಿ ಪೂರ್ತಿ ಮನೆಯಲ್ಲಿರುವ ನೀರು ಹೊರ ಹಾಕುವ ಪ್ರಯತ್ನದಲ್ಲಿ ನಿವಾಸಿಗಳು ಪರದಾಡಿದ್ದಾರೆ.
ಬೊಮ್ಮನಹಳ್ಳಿ ಹಾಗೂ ಆರ್. ಆರ್. ನಗರ ವಲಯದಲ್ಲಿ ಯಾವುದೇ ಅವಾಂತರಗಳಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ನವಲಗುಂದ: ಭಾರಿ ಮಳೆಗೆ ಜಲಾವೃತಗೊಂಡ ಶಾಲೆಯಲ್ಲಿ ಸಿಲುಕಿದ್ದ 150 ಮಕ್ಕಳ ರಕ್ಷಣೆ