Site icon Vistara News

Ram Mandir : ಅಯೋಧ್ಯೆ ರಾಮನಿಗೆ ಬೆಂಗಳೂರಿನಿಂದ ತುಳಸಿ ಹಾರ ರವಾನೆ

Bengaluru sends tulsi garland to Lord Ram in Ayodhya

ಬೆಂಗಳೂರು: ಅಯೋಧ್ಯೆಯಲ್ಲಿ (Ram Mandir) ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನಕ್ಕೆ ಕ್ಷಣಗಣನೆ ಶುರುವಾಗಿದೆ. ದೇಶದೊಳಗೆ ಮಾತ್ರವಲ್ಲ ಹೊರ ದೇಶದ ಭಾರತೀಯರು ಸಹ ಸಂಭ್ರಮದ ಕ್ಷಣಕ್ಕೆ ಕಾದುಕುಳಿತ್ತಿದ್ದಾರೆ. ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅಯೋಧ್ಯೆಯಲ್ಲಿ ಕಡೆ ಹಂತದ ಸಿದ್ಧತೆಗಳು ನಡೆಯುತ್ತಿವೆ. ಇತ್ತ ಅಯೋಧ್ಯೆ ರಾಮನಿಗೆ ಬೆಂಗಳೂರಿನಿಂದ ತುಳಸಿ ಹಾರವನ್ನು (Tulsi Mala) ರವಾನೆ ಮಾಡಲಾಗಿದೆ.

ಅಯೋಧ್ಯೆನಗರಿಯಲ್ಲಿ ರಾಮಮಂದಿರಕ್ಕಾಗಿ ಬೆಂಗಳೂರಿನಿಂದ ತುಳಸಿ ಬೀಜಗಳನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಇದು ನಾಟಿ ತುಳಸಿ ಬೀಜಗಳಾಗಿದ್ದು, ಹೆಚ್ಚು ಪವಿತ್ರಾತೆಯನ್ನು ಹೊಂದಿದೆ. ನಾಟಿ ತುಳಸಿಯನ್ನು ರಾಮನಿಗೆ ಹಾಕುವುದರಿಂದ ಹೆಚ್ಚು ಶ್ರೇಷ್ಠ ಎನ್ನಲಾಗಿದೆ.

ಹೀಗಾಗಿ ಈ ಮೊದಲೇ ಬೆಂಗಳೂರಿನಿಂದ ಕಳುಹಿಸಿದ್ದ ತುಳಸಿ ಬೀಜಗಳಿಂದ ಗಿಡಗಳನ್ನು ಬೆಳೆಯಲಾಗಿದೆ. ಇದಕ್ಕಾಗಿ ಬೋಜಪುರಿಯಲ್ಲಿ 2 ಎಕರೆ ತೋಟವೂ ಕೂಡ ನಿರ್ಮಿಸಿಲಾಗಿದೆ.

ಮಾತ್ರವಲ್ಲ ರಾಮನಿಗೆ ತುಳಸಿ ಮಾಲೆ ಕಟ್ಟಲು ಜ್ಯೋತಿಷಿ ಶಿವಕುಮಾರ್‌ ಎಂಬುವವರು ಬೆಂಗಳೂರಿನಿಂದ ಜನರನ್ನು ಕಳುಹಿಸಿದ್ದಾರೆ. ಅವರು ಬೆಂಗಳೂರು ಶೈಲಿಯಲ್ಲೇ ಮಾಲೆಗಳನ್ನು ಕಟ್ಟುತ್ತಿದ್ದಾರೆ. ಅಲ್ಲದೇ ಅಯೋಧ್ಯೆನಗರದ ಸ್ಥಳೀಯರಿಗೂ ತುಳಸಿಹಾರ ಕಟ್ಟಲು ತರಬೇತಿಯನ್ನು ನೀಡುತ್ತಿದ್ದಾರೆ. ಇನ್ನೂ ವಿಶೇಷ ತುಳಸಿ ಮಾಲೆಯನ್ನು ಜನವರಿ 22ರಂದು ನಡೆಯುವ ಶ್ರೀರಾಮನ ಪಟ್ಟಾಭೀಷೇಕ ಕಾರ್ಯಕ್ರಮದಲ್ಲಿ ಹಾಕಲಾಗುತ್ತದೆ.

ನಾಳೆ ಉಡುಪಿಯ ಕುಂಭಾಶಿಯಲ್ಲೂ ಶ್ರೀರಾಮನ ಪಾದುಕೆಯ ಮಂದಿರ ಲೋಕಾರ್ಪಣೆ

ಉಡುಪಿ: ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಲಿದೆ. ಅದೇ ದಿನ ಉಡುಪಿಯ ಕುಂಭಾಶಿಯಲ್ಲೂ (Kumbhasi in Udupi) ಶ್ರೀರಾಮನ ಪಾದುಕೆಯ ಮಂದಿರ ಲೋಕಾರ್ಪಣೆಗೊಳ್ಳುತ್ತಿದೆ.

ಕುಂದಾಪುರ ತಾಲೂಕು ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರವಾಗಿರುವ ಕುಂಭಾಶಿಯಲ್ಲಿ ನಿರ್ಮಾಣವಾಗಿರುವ ಈ ರಾಮ ಮಂದಿರವನ್ನು ಸೋಮವಾರ (ಜ. 22) ಲೋಕಾರ್ಪಣೆ ಮಾಡಲು ಸಕಲ ಸಿದ್ಧತೆ ನಡೆದಿದೆ.

ಅಯೋಧ್ಯಾ ಶ್ರೀ ರಾಮಚಂದ್ರ ಪ್ರಭುವಿನ ಬ್ರಹ್ಮರಥದ ನಿರ್ಮಾಣವನ್ನು ಶಿಲ್ಪಕಲಾ ಕೇಂದ್ರ ನಿರ್ಮಾಣ ಮಾಡಲಿದೆ. ಕಿಷ್ಕಿಂದ ಹನುಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಈ ಬ್ರಹ್ಮರಥವನ್ನು ಅಯೋಧ್ಯೆಗೆ ನೀಡಲಾಗುವುದು ಎಂದು ತಿಳಿದು ಬಂದಿದೆ.

ಟ್ರಸ್ಟ್ ಅಧ್ಯಕ್ಷ ಶ್ರೀ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿ ಮಹಾರಾಜ್ ರಥಶಿಲ್ಪಿಗಳಿಗೆ ಪಾದುಕೆಯನ್ನು ನೀಡಿದ್ದಾರೆ. ಶ್ರೀ ರಾಮಲಲ್ಲಾ ಬಾಲಾಲಯದಲ್ಲಿ ಇಟ್ಟು ಪೂಜಿಸಿದ ಪಾದುಕೆಗೆ ಕುಂಭಾಶಿಯಲ್ಲಿ ಮಂದಿರ ನಿರ್ಮಾಣ ಮಾಡಲಾಗಿದೆ. ಶ್ರೀ ರಾಮ ಸೀತೆ ಲಕ್ಷ್ಮಣ ಹನುಮ ಮೂರ್ತಿಯೊಂದಿಗೆ ಮಂದಿರವನ್ನು ಲೋಕಾರ್ಪಣೆ ಮಾಡಲಾಗುವುದು.

ಜಗದ್ಗುರು ಆನೆಗುಂದಿ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರಿಂದ ಪ್ರತಿಷ್ಠಾಪನೆ ಕಾರ್ಯಕ್ರಮವು ನೆರವೇರಲಿದೆ. ವಿದ್ವಾನ್‌ ಪಂಜ ಭಾಸ್ಕರ ಭಟ್ ಅವರು ಪ್ರತಿಷ್ಠಾಪನೆ ಕಾರ್ಯದ ನೇತೃತ್ವ ವಹಿಸಲಿದ್ದಾರೆ.

ಅಯೋಧ್ಯೆ ಕಾರ್ಯಕ್ರಮಕ್ಕಾಗಿ ರಾಜ್ಯದಲ್ಲಿ ರಜೆ ಇಲ್ಲ ಎಂದರೇ ಡಿಕೆಶಿ; ಡಿಸಿಎಂ ಹೇಳಿದ್ದೇನು?

ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ರಜೆ ನೀಡುವುದಿಲ್ಲ ಎಂಬುದನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಪರೋಕ್ಷವಾಗಿ ತಿಳಿಸಿದ್ದಾರೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, “ನಾವು ಪೂಜೆ, ಪುನಸ್ಕಾರ ಮಾಡಿಕೊಂಡು ನಮ್ಮ ಸಂಸ್ಕೃತಿ ಪಾಲನೆ ಮಾಡಿಕೊಂಡು ಬಂದಿದ್ದೇವೆ. ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ” ಎಂದು ತಿಳಿಸಿದರು.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮವಾರ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂಬ ಬಿಜೆಪಿ ನಾಯಕರ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಭಕ್ತಿ, ಧರ್ಮ, ಗೌರವವನ್ನು ನಾವು ಪ್ರಚಾರಕ್ಕೆ ಬಳಸುವುದಿಲ್ಲ. ಪ್ರಾರ್ಥನೆಗಳಿಂದ ಫಲ ಸಿಗುತ್ತದೆ ಎಂಬುದು ನಮ್ಮ ನಂಬಿಕೆ. ಹೀಗಾಗಿ ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದ್ದೇವೆ. ಬೇರೆಯವರು ಹೇಳುವ ಮುನ್ನವೇ ನಮ್ಮ ಸರ್ಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸೂಚನೆ ನೀಡಿದೆ. ದೇವಾಲಯಗಳಲ್ಲಿ ಯಾವ ಪೂಜೆ, ಪುನಸ್ಕಾರ ಮಾಡಬೇಕೋ ಅದನ್ನು ಮಾಡಲಾಗುವುದು. ಬೇರೆಯವರಿಂದ ನಾವು ಹೇಳಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಹೇಳಿದರು.

ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು

ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ, ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version