ಅಯೋಧ್ಯೆ: ಎಲ್ಲವೂ ರಾಮನ ಇಚ್ಛೆಯೇ ಆಗಿದೆ. ಮಂದಿರ ನಿರ್ಮಾಣ, ಉದ್ಘಾಟನೆ (Ram Mandir) ಎಲ್ಲವೂ ರಾಮನ ಇಚ್ಛೆಯೇ. ದೇಶ ರಾಮನ ಕಡೆ ತಿರುಗಿದೆ ಎಂದರೆ ನಮ್ಮ ದೇಶ ಧರ್ಮದ ಕಡೆ ಬರುತ್ತಿದೆ ಎಂದರ್ಥ. ಇಲ್ಲಿಂದ ಕರೆ ಬಂದಾಗ ರಾಮನ ಆಜ್ಞೆ ಎಂದು ನಾವು ಎಲ್ಲಾ ಕಾರ್ಯಕ್ರಮ ಬದಿಗಿಟ್ಟು ಅಯೋಧ್ಯೆಗೆ ಬಂದಿದ್ದೇವೆ. ಈ ಕ್ಷಣಕ್ಕಿಂತ ಅತೀ ಹೆಚ್ಚು ಸಂತೋಷ ನಾನು ಕಾಣಲು ಸಾಧ್ಯವಿಲ್ಲ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಸ್ವಾಮೀಜಿ ಅವರು, ಈ ಮುಂಚೆ ದೇಶದಲ್ಲಿ ಕತ್ತಲೆ ಕಾಣಿಸುತ್ತಿತ್ತು. ಆದರೆ ಈಗ ಹಾಲು ಕುಡಿದಷ್ಟು, ಅಮೃತ ಕುಡಿದಷ್ಟು ಖುಷಿ ಇದೆ. ಯಾಕೆಂದರೆ ರಾಮ ಮಂದಿರದಿಂದ ದೇಶದ ಮುಂದೆ ಬೆಳಕು ಕಾಣುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಷಣಗಳು ಕ್ಷಣದಲ್ಲಿ ಸತ್ತು ಹೋಗುತ್ತವೆ, ಆದರೆ ಇದೊಂದು ಇತಿಹಾಸಿಕ ಕ್ಷಣ. ಈ ಕ್ಷಣ ಹಿಂದೆಯೂ ಇರೋಲ್ಲ, ಮುಂದೆಯೂ ಬರೋದಿಲ್ಲ, ಆದರೆ ಈ ಕ್ಷಣ ಮಾತ್ರ ಶಾಶ್ವತ. 500 ವರ್ಷಗಳ ಅನ್ಯಾಯ, ಕೊರತೆ ಎಲ್ಲವಕ್ಕೂ ಪೂರ್ಣತೆ ಬರುತ್ತಿದೆ. ನಾಳೆ ದಿವಸ ಭಾರತಕ್ಕೆ ಒಂದು ಟರ್ನಿಂಗ್ ಪಾಯಿಂಟ್. ರಾಮನ ವಿಚಾರ ಮಾತ್ರ ಅಲ್ಲ, ಎಲ್ಲದರ ಬಗ್ಗೆಯೂ ವಿರೋಧ ಇರುತ್ತದೆ. ಕೆಟ್ಟದಕ್ಕೂ, ಒಳ್ಳೆಯದಕ್ಕೂ ಎರಡಕ್ಕೂ ವಿರೋಧ ಈ ಪ್ರಪಂಚದಲ್ಲಿ ಇದ್ದೆ ಇದೆ. ವಿರೋಧ ಬರುತ್ತಿದೆ ಅಂದರೆ ಜನ ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ ಅಂತ ಅರ್ಥ ಎಂದು ತಿಳಿಸಿದ್ದಾರೆ.
ರಾಮನ ಬಗ್ಗೆ ವಿವಾದ ಅಳಿದು ಹೋಗುತ್ತಾ ಸಂವಾದ ಬರುತ್ತಿದೆ. ಕೆಲವು ವರ್ಷಗಳ ಹಿಂದೆ ವಿರೋಧವನ್ನೇ ಮಾಡುತ್ತಿದ್ದವರು ಈಗ ರಾಮ ನಮ್ಮವ ಅಂತಿದ್ದಾರೆ. ಕರ್ನಾಟಕ ಇಲ್ಲದೆ ರಾಮಾಯಣವಿಲ್ಲ. ಯುದ್ಧ ನಡೆದಾಗ ರಾಮನ ಜೊತೆ ಕಪಿಗಳು ಬಂದವು. ಅವರೆಲ್ಲಾ ಬಂದಿದ್ದು ಕರ್ನಾಟಕದಿಂದ. ಆ ಸಮಯದಲ್ಲಿ ಉತ್ತರ ಭಾರತದಿಂದ ಅಥವಾ ಅಯೋಧ್ಯೆಯಿಂದ ಯಾರೂ ಬಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಅಯೋಧ್ಯೆಯ ರಾಮ ಮಂದಿರ ರಾಷ್ಟ್ರೀಯ ಅಸ್ಮಿತೆಯ ಸಂಕೇತ
ಸೀತೆಯನ್ನು ಹುಡುಕಿದ್ದು ಕರ್ನಾಟಕದಲ್ಲಿ, ಸೀತೆ ಚಿನ್ನ ಎಸೆದ ಸ್ಥಳ ಕರ್ನಾಟಕ ಆಗಿತ್ತು. ರಾಮ ಸೀತೆಯರಿಗೆ ಕರ್ನಾಟದ ಭಾಗ ಎಂದರೆ ತುಂಬಾ ಪ್ರೀತಿ ಇತ್ತು. ಹಾಗಾಗಿ ಕರ್ನಾಟಕ ಮತ್ತೆ ಅಯೋಧ್ಯೆ ಸಂಬಂಧ ಈಗಿನಿಂದ ಅಲ್ಲ, ರಾಮನ ಕಾಲದಿಂದಲೂ ಇದೆ ಎಂದು ತಿಳಿಸಿದ್ದಾರೆ.