Site icon Vistara News

ರಾಮ, ಕೃಷ್ಣ ಇತಿಹಾಸ ಪುರುಷರಲ್ಲ, ಕಾದಂಬರಿಯ ಪಾತ್ರಗಳು; ಅಶೋಕ ನಿಜವಾದ ಇತಿಹಾಸ ಪುರುಷ ಎಂದ ನಿವೃತ್ತ ಜಿಲ್ಲಾ ನ್ಯಾಯಾಧೀಶರು

rama krishna

ವಿಜಯಪುರ: ರಾಮ ಹಾಗೂ ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿಯ ಪಾತ್ರಧಾರಿಗಳು ಅಷ್ಟೇ. ಅಶೋಕ ಚಕ್ರವರ್ತಿ ನಿಜವಾದ ಇತಿಹಾಸ ಪುರುಷ ಎಂದು ವಿಜಯಪುರದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ವಸಂತ ಮುಳಸಾವಳಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸೌಹಾರ್ದ ವೇದಿಕೆಯಿಂದ ನಗರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ʻʻಸಂವಿಧಾನದ ಆಶಯ ಈಡೇರಿದೆಯೇ?ʼʼ ಎನ್ನುವ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ʻʻಮುಸ್ಲಿಮರ ಬಗ್ಗೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ, ಅಕ್ಬರನ ಹೆಂಡತಿ ಹಿಂದು. ಆದರೂ ಅವಳು ಧರ್ಮಾಂತರ ಆಗಲಿಲ್ಲ. ಅವಳು ಹಿಂದುವಾಗಿಯೇ, ಅಕ್ಬರ್ ಮುಸ್ಲಿಮರಾಗಿಯೇ ಇದ್ದರು. ಅಕ್ಬರನ ಆಡಳಿತಾವಧಿಯಲ್ಲಿ ಕೃಷ್ಣನ ದೇವಸ್ಥಾನ ಕಟ್ಟಿಸಲಾಗಿತ್ತುʼʼ ಎಂದು ವಿವರಿಸಿದರು.

ʻʻಭಾರತವನ್ನು 700 ವರ್ಷಗಳ ಕಾಲ ಮುಸ್ಲಿಮರು ಆಳಿದ್ದಾರೆ. ಅವರು ಮನಸ್ಸು ಮಾಡಿದ್ದರೆ, ಹಿಂದು ವಿರೋಧಿಯಾಗಿದ್ದರೆ ಎಲ್ಲ ಹಿಂದೂಗಳನ್ನು ಕೊಲ್ಲಬಹುದಿತ್ತು. ಆದರೆ ಮಾಡಲಿಲ್ಲ. ಅವರು ಹಿಂದು ಪ್ರೇಮಿಗಳಾಗಿದ್ದರುʼʼ ಎಂದರು ನಿವೃತ್ತ ನ್ಯಾಯಾಧೀಶರಾದ ವಸಂತ ಮುಳಸಾವಳಗಿ.

ನಿವೃತ್ತ ನ್ಯಾಯಾಧೀಶರಾದ ವಸಂತ ಮುಳಸಾವಳಗಿ.

ಅಂಬೇಡ್ಕರ್‌ ಅವರನ್ನು ಬೆಂಬಿಡದೆ ಕಾಡಿದರು!
ʻʻಅಂಬೇಡ್ಕರ್ ಅವರು ಬಾಂಬೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಅಲ್ಲಿ ಸೋಲಿಸಿದರು. ಅನಂತರ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧೆ ಮಾಡಿ ಗೆದ್ದರು. ಆದರೆ ಇವರು ಸ್ಪರ್ಧಿಸಿದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಸೇರಿಸಲಾಯಿತು. ಒಟ್ಟಿನಲ್ಲಿ ಇವರನ್ನು ಸಂಸತ್ತಿನಲ್ಲಿ ಇರದಂತೆ ನೋಡಿಕೊಳ್ಳುವಲ್ಲಿ ಕೆಲವರು ಯಶಸ್ವಿಯಾಗಿದ್ದರುʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ʻʻಭಾರತದ ಸೇನೆ ಒಂದು ಬಿಟ್ಟು, ಎಲ್ಲ ಕ್ಷೇತ್ರಗಳಲ್ಲಿಯೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಇದು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಮ್ಮ ದೇಶಕ್ಕೆ ಬಂದಿದೆʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ʻʻನಮ್ಮ ವ್ಯವಸ್ಥೆಯಲ್ಲಿ ಉಳ್ಳವರಿಗೆ ಒಂದು ನ್ಯಾಯ. ಇನ್ನುಳಿದವರಿಗೆ ಒಂದು ನ್ಯಾಯ ಎನ್ನುವಂತಾಗಿದೆ. ವಿಧಾನಸೌಧದಲ್ಲಿ ಕಾರಿನ ಡಿಕ್ಕಿಯಲ್ಲಿ ಕಂತೆ ಕಂತೆ ಹಣ ಸಿಕ್ಕಿತ್ತು. ಅದು ಎಲ್ಲಿಗೆ ಹೋಯ್ತು? ಆ ಪ್ರಕರಣ ಏನಾಯ್ತು ಅಂತ ಗೊತ್ತೇ ಆಗಲಿಲ್ಲ. ಶಿಕ್ಷಕರ ನೇಮಕಾತಿಯಲ್ಲಿ ಹಗರಣ, ಪೊಲೀಸ್ ನೇಮಕಾತಿಯಲ್ಲಿ ಹಗರಣ. ಎಲ್ಲೆಡೆಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರಿಂದ ಯುವಕರು ಎಚ್ಚೆತ್ತುಕೊಳ್ಳಬೇಕುʼʼ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ವಿದ್ಯಾವತಿ ಅಂಕಲಗಿ, ಜಿ.ಎಸ್.ಪಾಟೀಲ, ಫಯಾಜ್ ಕಲಾದಗಿ ಉಪಸ್ಥಿತರಿದ್ದರು.

ಇದನ್ನೂ ಓದಿ | ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ಅಭಿಲಾಷೆ ವ್ಯಕ್ತಪಡಿಸಿದ ಪಾಕಿಸ್ತಾನದ ಕ್ರಿಕೆಟಿಗ, ಯಾಕೆ ಗೊತ್ತೇ?

Exit mobile version