Site icon Vistara News

Antrix-Devas Case: ರಾಮಚಂದ್ರನ್‌ ವಿಶ್ವನಾಥನ್‌ ದೇಶಭ್ರಷ್ಟ ಆರ್ಥಿಕ ಅಪರಾಧಿ: ಸಿಬಿಐ ಸ್ಪೆಷಲ್ ಕೋರ್ಟ್‌

devas multimedia private limited CEO Ramachandran Viswanathan

#image_title

ಬೆಂಗಳೂರು: ಆ್ಯಂಟ್ರಿಕ್ಸ್‌-ದೇವಾಸ್‌ ಒಪ್ಪಂದದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ದೇವಾಸ್‌ ಮಲ್ಟಿಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಿಇಒ ರಾಮಚಂದ್ರನ್‌ ವಿಶ್ವನಾಥನ್‌ ಅವರನ್ನು (Antrix-Devas Case) ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ. ಈ ಮೂಲಕ ಈಗಾಗಲೇ ದೇಶ ತೊರೆದಿರುವ ಆರ್ಥಿಕ ಅಪರಾಧಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಇರುವ ಪಟ್ಟಿಗೆ ರಾಮಚಂದ್ರನ್‌ ವಿಶ್ವನಾಥನ್‌ ಸೇರ್ಪಡೆಯಾಗಿದ್ದಾರೆ.

ಆ್ಯಂಟ್ರಿಕ್ಸ್‌-ದೇವಾಸ್‌ ಒಪ್ಪಂದದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ 2018ರಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಪ್ರಕರಣದಲ್ಲಿ ದೇವಾಸ್‌ ಸಿಇಒ ರಾಮಚಂದ್ರನ್‌ ವಿಶ್ವನಾಥನ್‌ ಹಾಗೂ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ವಿದೇಶದಲ್ಲಿರುವ ರಾಮಚಂದ್ರನ್ ವಿಶ್ವನಾಥನ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿ, ವಿಚಾರಣೆಯನ್ನು ಜೂನ್‌ 26ಕ್ಕೆ ಮುಂದೂಡಿದೆ.

ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆ 2018ರ ಸೆಕ್ಷನ್‌ 10ರ ಅಡಿ ರಾಮಚಂದ್ರನ್ ವಿಶ್ವನಾಥನ್‌ಗೆ ನ್ಯಾಯಾಲಯವು ವಿದೇಶಾಂಗ ಸಚಿವಾಲಯದ ಮೂಲಕ 2023ರ ಜನವರಿಯಲ್ಲಿ ನೋಟಿಸ್‌ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಇ.ಡಿ. ಮಾಡಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ಇದನ್ನೂ ಓದಿ | Me too case:‌ ಮೀಟೂ ಪ್ರಕರಣದಲ್ಲಿ ನಟಿ ಶೃತಿ ಹರಿಹರನ್‌ಗೆ ನೋಟಿಸ್‌

ಏನಿದು ಪ್ರಕರಣ?

2004ರಲ್ಲಿ ಬೆಂಗಳೂರಿನಲ್ಲಿ ಉಪಗ್ರಹ ಆಧಾರಿತ ಮಲ್ಟಿಮೀಡಿಯಾ ಸೇವೆಗಳನ್ನು ನೀಡುವ ಉದ್ದೇಶದಿಂದ ವಿಶ್ವನಾಥನ್‌ ಅವರು ದೇವಾಸ್‌ ಮಲ್ಟಿಮೀಡಿಯಾ ಪ್ರೈ. ಲಿ ಎಂಬ ಕಂಪೆನಿ ಆರಂಭಿಸಿದ್ದರು. ಒಂದು ವರ್ಷದ ಬಳಿಕ ದೇವಾಸ್‌ ಸಂಸ್ಥೆಯು ಇಸ್ರೋದ ವಾಣಿಜ್ಯ ವಿಭಾಗ ಆಂಟ್ರಿಕ್ಸ್‌ ಕಾರ್ಪೊರೇಶನ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. ಆ್ಯಂಟ್ರಿಕ್ಸ್‌ ಎರಡು ಉಪಗ್ರಹಗಳನ್ನು ನಿರ್ಮಿಸಬೇಕಿತ್ತು. ಅದೇ ರೀತಿ ದೇವಾಸ್‌ ಎಸ್-ಬ್ಯಾಂಡ್‌ ಟ್ರಾನ್ಸ್‌ಪಾಂಡರ್ಸ್ ಸಂಹವನ ಉಪಗ್ರಹದ ಮೂಲಕ ಭಾರತೀಯ ಮೊಬೈಲ್‌ ಬಳಕೆದಾರರಿಗೆ ಮಲ್ಟಿಮೀಡಿಯಾ ಸೇವೆ ನೀಡಬೇಕಿತ್ತು. ನಂತರ ಆ್ಯಂಟ್ರಿಕ್ಸ್‌ -ದೇವಾಸ್‌ ಒಡಂಬಡಿಕೆಯಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು.

ಅಕ್ರಮವಾಗಿ 578 ಕೋಟಿ ರೂಪಾಯಿಗಳನ್ನು ಖಾಸಗಿ ಮಲ್ಟಿಮೀಡಿಯಾ ಕಂಪೆನಿ ದೇವಾಸ್‌ ಲಾಭ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

Exit mobile version