ಬೆಂಗಳೂರು: ರಾಮಚಂದ್ರಾಪುರ ಮಠದ ವಿರುದ್ಧ ಸಲ್ಲಿಸಿದ್ದ ಪಿಐಎಲ್ ಹಿಂಪಡೆಯಲು 5 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಹೀಗಾಗಿ ಆರೋಪಿಗಳಾದ ಕುಮುಟ ಮೂಲದ ಗೋಪಾಲ ಸದಾಶಿವ ಗಾಯತ್ರಿ, ರಾಜಗೋಪಾಲ ಅಡಿ, ಶೇಷಾನಂದ ವಿಶ್ವೇಶ್ವರ ಅಡಿ, ಅಮಿತ್ ನಾಡಕರ್ಣಿ ಮತ್ತು ಗಣಪತಿ ಗಜಾನನ ಹಿರೇ ಮತ್ತಿತರರಿಗೆ ಹಿನ್ನಡೆಯಾಗಿದೆ.
ಬೆಂಗಳೂರಿನ ಗಿರಿನಗರ ಠಾಣಾ ಪೊಲೀಸರು 2014ರಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. 32ನೇ ಎಸಿಎಂಎಂ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯನ್ನು ತಡೆಯುವಂತೆ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ.
ಏನಿದು ಪ್ರಕರಣ?
ಆರೋಪಿಗಳು ಅಸ್ತ್ರ ಮತ್ತು ಗೋಕರ್ಣ ಹಿತರಕ್ಷಣಾ ಸಮಿತಿ ಎಂಬ ಎರಡು ಸಂಘಟನೆಗಳ ಮೂಲಕ ಹೊಸನಗರದ ರಾಮಚಂದ್ರಾಪುರ ಮಠದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದನ್ನು ವಾಪಸ್ ಪಡೆಯಲು 5 ಕೋಟಿ ರೂಪಾಯಿ ಲಂಚ ಕೊಡುವಂತೆ ಮಠಕ್ಕೆ ಫೋನ್ ಮಾಡಿ ಬೇಡಿಕೆ ಇಟ್ಟಿದ್ದರು. ಅಂತೆಯೇ ಪ್ರಕರಣದಲ್ಲಿ ಮುಂಗಡ 10 ಲಕ್ಷ ರೂಪಾಯಿ ಪಡೆಯುತ್ತಿರುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದಿದ್ದರು.
ಪ್ರಕರಣದ ಬಗ್ಗೆ ಪೊಲೀಸರು ಸಮರ್ಥ ಹಾಗೂ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಆರೋಪಿಗಳ ಕೃತ್ಯ ಸಾಬಿತಾಗಿದೆ. ಆದ್ದರಿಂದ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲವೆಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನ ಓದಿ : Tejasvi Surya : ತೇಜಸ್ವಿ ಸೂರ್ಯ ಮೊಬೈಲ್‌ನಿಂದ ಹಣ ಸುಲಿಗೆಯ ಬೆದರಿಕೆ ಕರೆ
ಈ ಹಿಂದೆ ಪೊಲೀಸರು ತನಿಖೆ ನಡೆಸಿ ಎಸಿಎಂಎಂ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸುತ್ತಿದ್ದಂತೆ ಆರೋಪಿಗಳು ಪ್ರಕರಣದಲ್ಲಿ ತಮ್ಮನ್ನು ಕೈ ಬಿಡುವಂತೆ ಈ ಅರ್ಜಿ ಸಲ್ಲಿಸಿದ್ದರು. ಅದನ್ನು ಕೋರ್ಟ್ ರದ್ದು ಮಾಡಿತ್ತು. ಬಳಿಕ ಅವರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಪರಾಮರ್ಶನಾ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದ ಕೇಳಿದ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿತ್ತು.
ಆರೋಪಿಗಳ ಮೇಲೆ ಮಾಡಿರುವ ಆರೋಪಗಳು ಆಧಾರರಹಿತ ಎಂಬುದಾಗಿ ಮ್ಯಾಜಿಸ್ಟ್ರೇಟ್ಗೆ ಮನವರಿಕೆಯಾದರೆ ಮಾತ್ರ ಆರೋಪದಿಂದ ಕೈ ಬಿಡಲು ಸಾಧ್ಯ. ಆರೋಪಪಟ್ಟಿ ಸಲ್ಲಿಕೆ ಮಾಡಲು ಸಾಕಷ್ಟು ಪುರಾವೆಗಳು ಇದ್ದರೆ ಸಾಧ್ಯವಿಲ್ಲ ಎಂಬುದಾಗಿ ಸಿಟಿ ಸಿವಿಲ್ ನ್ಯಾಯಾಲಯ ತನ್ನ ತೀರ್ಪು ನೀಡುವ ವೇಳೆ ಅಭಿಪ್ರಾಯಪಟ್ಟಿತ್ತು.