ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಜೆಡಿಎಸ್ ಸೇರ್ಪಡೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಜಾರಕಿಹೊಳಿ ಸಹೋದರರ ಬಳಿ ಮಾತುಕತೆ ನಡೆದಿದೆ ಎಂಬರ್ಥದಲ್ಲೇ ಮಾತನಾಡಿರುವ ಅವರು, ನಾಯಕರ ಮಧ್ಯೆ ಪರಸ್ಪರ ಸಂದೇಶ ಹೋಗಿಬಂದು ಆಗುತ್ತಿದೆ. ಶೇಕಡಾ ನೂರು ಮಾತುಕತೆಯಾಗಿ, ಸಭೆ ನಡೆಸಿ ಡಿಕ್ಲೇರ್ ಮಾಡಿದಾಗಲೇ ತಿಳಿಯಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಯುತ್ತಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದಂತಾಗಿದೆ.
ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರ್ಪಡೆ ಆಗುತ್ತಾರೆ ಎಂದು ನಾವು ಹೆಸರು ತೆಗೆದುಕೊಂಡು ಹೇಳಿಲ್ಲ. ತಾಳಿ ಕಟ್ಟುವ ಮುಂಚೆ ಯಾವ ಹೆಣ್ಣೂ ಮದುವೆ ಆಗಿದೆ ಎಂದು ಹೇಳಲ್ಲ. ಈಗ ಬಂದು ನೋಡಿಕೊಂಡು ಹೋಗಿದ್ದಾರೆ ಎಂದಷ್ಟೇ ಹೇಳುತ್ತಾಳೆ. ನಿಶ್ಚಿತಾರ್ಥ ಆದರೂ ಹೇಳಲ್ಲ. ತಾಳಿ ಕಟ್ಟಿದ ಮೇಲೆಯೇ ಹೆಂಡ್ತಿ ಅಂತ ಹೇಳಬೇಕು. ನೋಡಿಕೊಂಡು ಹೋಗಿದ್ದಾರೆ ಎಂದು ಹೇಳಿದರೆ ಬೇರೆಯವರು ಯಾರೂ ನೋಡಲು ಬರಲ್ಲ ಎಂದು ಪಕ್ಷ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಬಾಗಿಲು ತೆರೆದಿದೆ
ನಮ್ಮ ನಾಯಕರು ಡೋರ್ ಓಪನ್ ಮಾಡಿ ಇಟ್ಟಿದ್ದಾರೆ. ಏನು ಸಂದೇಶವನ್ನು ಕೊಡಬೇಕೋ ಅದನ್ನು ಕೊಡುತ್ತಿದ್ದಾರೆ. ನಾಯಕರ ಮಧ್ಯೆ ಪರಸ್ಪರ ಸಂದೇಶ ಹೋಗುತ್ತಿವೆ ಮತ್ತು ಬರುತ್ತಿವೆ. ಅವರ ಜೆಡಿಎಸ್ ಸೇರ್ಪಡೆ ಖಚಿತವಾಗುವುದು ಶೇಕಡಾ ನೂರು ಮಾತುಕತೆ ನಡೆದಾಗಲೇ ಅಲ್ಲವೇ? ಒಂದು ಸಭೆ ಮಾಡಿ ಘೋಷಣೆ ಮಾಡಿದಾಗ ಮಾತ್ರ ಎಲ್ಲ ವಿಷಯ ಬಹಿರಂಗವಾಗುತ್ತದೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.
ಇದನ್ನೂ ಓದಿ | Love jihad | ರಾಜ್ಯದಲ್ಲಿ ಕಠಿಣ ಲವ್ ಜಿಹಾದ್ ನಿಗ್ರಹ ಕಾಯಿದೆ ಜಾರಿಗೆ ಆಗ್ರಹಿಸಿ ಡಿ.11ರಿಂದ ಆಂದೋಲನ
ರಾಜ್ಯದಲ್ಲಿ ಮರಾಠಿಗರು ಸುಖವಾಗಿದ್ದಾರೆ
ಕರ್ನಾಟಕದಲ್ಲಿ ಎಲ್ಲ ಭಾಷಿಕರು ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದಾರೆ. ನಿಮ್ಮ ಊರನ್ನು ನೀವು ಮೊದಲು ನೋಡಿಕೊಳ್ಳಿ, ನಮ್ಮದರಲ್ಲಿ ಕೈ ಆಡಿಸಲು ಬರಬೇಡಿ ಎಂದು ಸಿ.ಎಂ. ಇಬ್ರಾಹಿಂ ಮಹಾರಾಷ್ಟ್ರ ನಾಯಕರಿಗೆ ತಾಕೀತು ಮಾಡಿದರು.
ಮರಾಠಿ ಭಾಷಿಕರ‍್ಯಾರೂ ಇಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿಕೊಂಡಿಲ್ಲ. ಅವರೆಲ್ಲರೂ ನಮ್ಮ ರಾಜ್ಯದಲ್ಲಿ ಸುಖವಾಗಿ ಬದುಕುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮರಾಠಿ ಭಾಷಿಕ ರೈತರ ಸಾಲವೂ ಮನ್ನಾ ಆಗಿದೆ. ಬೆಳಗಾವಿಯಲ್ಲಿ 15 ಸಾವಿರ ಮರಾಠಾ ಭಾಷಿಕ ರೈತರ ಸಾಲ ಮನ್ನಾ ಆಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಮದುವೆ ಆದ ಮೇಲೆ ವಾಲಗ ಊದಿದರೆ ಏನು ಪ್ರಯೋಜನ? ಮಹಾರಾಷ್ಟ್ರ ನಾಯಕರು ಖಾಲಿ ವಾಲಗ ಊದುತ್ತಿದ್ದಾರೆ, ಊದಿಕೊಳ್ಳಲಿ ಎಂದು ಅವರು ಹೇಳಿದರು.
ಇದನ್ನೂ ಓದಿ | Border Dispute | ಮರಾಠಿಗರ ಪುಂಡಾಟ ಖಂಡಿಸಿ ವಿವಿಧೆಡೆ ಕರವೇ ಪ್ರತಿಭಟನೆ; ಗೋಕಾಕ್‌ನಲ್ಲಿ ಹೆದ್ದಾರಿ ತಡೆ