Site icon Vistara News

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌; ಹಿಂದು ಕಾರ್ಯಕರ್ತನನ್ನು ಎನ್‌ಐಎ ವಿಚಾರಣೆ ಮಾಡಿದ್ದು ಯಾಕೆ?

ಶಿವಮೊಗ್ಗ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ (Rameshwaram Cafe Blast) ತನಿಖೆಯನ್ನು ಎನ್‌ಐಎ ಚುರುಕುಗೊಳಿಸಿದೆ. ತೀರ್ಥಹಳ್ಳಿಯ ಮೊಬೈಲ್ ಅಂಗಡಿಯೊಂದಕ್ಕೆ ಶುಕ್ರವಾರ ಭೇಟಿ ನೀಡಿದ್ದ ಎನ್‌ಐಎ ಅಧಿಕಾರಿಗಳು, ಹಿಂದು ಕಾರ್ಯಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಿಂದು ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನ್ನು ಎನ್‌ಐಎ ವಶಕ್ಕೆ ಪಡೆದಿದ್ದು, ಇಬ್ಬರನ್ನೂ ಪ್ರಕರಣದ ಸಾಕ್ಷಿಗಳನ್ನಾಗಿ ಮಾಡಲು ವಿಚಾರಣೆ ಮಾಡಲಾಗುತ್ತಿದೆ. ಕಳೆದ 10 ದಿನಗಳ ಹಿಂದೆ ಮೊಬೈಲ್‌ ಅಂಗಡಿಯ ಇಬ್ಬರು ಯುವಕರನ್ನು ಎನ್‌ಐಎ ವಿಚಾರಣೆ ನಡೆಸಿತ್ತು. ಇದೀಗ ಅವರ ಜತೆ ಸಂಪರ್ಕ ಇದ್ದ ಕಾರಣಕ್ಕೆ ಹಿಂದು ಕಾರ್ಯಕರ್ತನನ್ನೂ ವಿಚಾರಣೆಗೆ ಒಳಪಡಿಸಿರಬಹುದು ಎನ್ನಲಾಗುತ್ತಿದೆ.

ಸಾಯಿ ಪ್ರಸಾದ್ ಹಳೆಯ ಮೊಬೈಲ್ ಅನ್ನು ಮೊಬೈಲ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ. ಇದನ್ನು ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಜಾಮಿಲ್‌ಗೆ ಮಾರಾಟ ಮಾಡಿದ್ದ. ಇದೇ ಮೊಬೈಲ್‌ನಲ್ಲಿ ಮುಜಾಮಿಲ್ ತಲೆ ಮರೆಸಿಕೊಂಡ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ ಜತೆ ಸಂಪರ್ಕ ಹೊಂದಿದ್ದ. ಮುಜಾಮಿಲ್ ಬಂಧನದ ವೇಳೆ ಎನ್‌ಐಎ ಮೊಬೈಲ್ ವಶಪಡಿಸಿಕೊಂಡಿತ್ತು. ಪರಿಶೀಲನೆ ವೇಳೆ ಆ ಮೊಬೈಲ್‌ ಸಾಯಿ ಪ್ರಸಾದ್‌ಗೆ ಸೇರಿದ್ದು ಎಂಬ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ | Road Accident : ನಿಂತಿದ್ದ ಬಸ್‌ಗೆ ಚುನಾವಣಾ ವೀಕ್ಷಕರ ವಾಹನ ಡಿಕ್ಕಿ; ಚಾಲಕ, ಪೇದೆ ಗಂಭೀರ

ಮಾರ್ಚ್‌ 1 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಇದರಿಂದ ರಾಜಧಾನಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪ್ರಕರಣದ ಆರೋಪಿಗಳಿಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿದೆ.

ಬಾಂಬ್‌ ಬ್ಲಾಸ್ಟ್‌ ಮಾಡಿದವರು ಬಿಜೆಪಿ ನಾಯಕರಾದರೂ ಗುಂಡಿಟ್ಟು ಕೊಲ್ಲಿ- ಬೇಳೂರು ಗೋಪಾಲಕೃಷ್ಣ

rameshwaram cafe bengaluru incident MLA Belur Gopalakrishna

ಶಿವಮೊಗ್ಗ: ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆಸಿದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಮೂಲದ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು, ಯಾರನ್ನು ಬಿಡಬಾರದು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತಾರ ನ್ಯೂಸ್‌ಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಬಂಧನ ಅಚ್ಚರಿ ಮೂಡಿಸಿದೆ. ಬಿಜೆಪಿ ಅಥವಾ ಕಾಂಗ್ರೆಸ್‌ ಯಾರೇ ಆಗಿರಲಿ ಅವರನ್ನು ಗುಂಡಿಟ್ಟು ಹೊಡೆಯಿರಿ. ಅಷ್ಟೇ ಅಲ್ಲ ಪಾಕಿಸ್ತಾನ ಜಿಂದಾಬಾದ್‌ ಎಂದರು ಡಮ್ ಅನ್ನಿಸಬೇಕು. ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು, ಯಾರನ್ನು ಬಿಡಬಾರದು ಎಂದಿದ್ದಾರೆ.

Exit mobile version