Site icon Vistara News

Forest Officer : ಆನೆ-ಮಾನವ ಸಂಘರ್ಷ ತಡೆ ವಿಫಲ ಸೇರಿ ಕರ್ತವ್ಯಲೋಪಕ್ಕೆ ವಲಯ ಅರಣ್ಯಾಧಿಕಾರಿ ಅಮಾನತು

forest officer suspend hasan ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪಾ ಅಮಾನತು

ಹಾಸನ: ಸಿಬ್ಬಂದಿಯನ್ನು ನಿಯಂತ್ರಣ ಮಾಡುವಲ್ಲಿ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ, ನೀಡಿದ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ (Forest Officer) ಶಿಲ್ಪಾ ಎಸ್.ಎಲ್. ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಅಮಾನತು ಆದೇಶ ಹೊರಬಿದ್ದಿದೆ. ಅಲ್ಲದೆ, ಅಧಿಕಾರಿ ಸಿಬ್ಬಂದಿ ವರ್ಗದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಲು, ವಿಭಾಗದ ಹಾಗೂ ವಲಯದ ಆಡಳಿತಾತ್ಮಕ ತೊಡಕು ಉಂಟಾಗಲು ನೇರ ಕಾರಣಕರ್ತರಾಗಿದ್ದಾರೆಂಬ ಇವರ ಮೇಲಿನ ಆರೋಪವೂ ಸಾಬೀತಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಮೇಲಧಿಕಾರಿಗಳ ಯಾವುದೇ ಸೂಚನೆ ಹಾಗೂ ಆದೇಶ ಪತ್ರಗಳಿಗೂ ತಮ್ಮ ಕಾರ್ಯಶೈಲಿಯನ್ನು ತಿದ್ದಿಕೊಳ್ಳದೆ ಇರುವುದು ಶಿಸ್ತು ಕ್ರಮಕ್ಕೆ ಕಾರಣ ಎಂಬುದಾಗಿ ಅಮಾನತು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಮವಸ್ತ್ರಧಾರಿತರಾದ ಅಧಿಕಾರಿಯಾದವರು ಆಡಳಿತಾತ್ಮಕ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಆದರೆ, ಶಿಲ್ಪಾ ಅವರು ಈ ಬಗ್ಗೆ ಗಮನಹರಿಸಿಲ್ಲ. ವಲಯ ಅರಣ್ಯಾಧಿಕಾರಿಗೆ ಇರುವ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿ ಆರ್ಥಿಕ ನಷ್ಟಕ್ಕೂ ಕಾರಣರಾಗಿದ್ದಾರೆ ಎಂದೂ ಅಮಾನತು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸ್ಥಾನದಲ್ಲಿದ್ದಲ್ಲಿ ಈ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರಲಿದೆ. ಜತೆಗೆ ಪೂರಕ ಸರ್ಕಾರಿ ಪರ ಸಾಕ್ಷ್ಯಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆಯೂ ಇರುವುದರಿಂದ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಕೂಡಲೇ ಸಕಲೇಶಪುರ ವಲಯದ ಕರ್ತವ್ಯದಿಂದ ಅಮಾನತುಗೊಳಿಸಿ, ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | Urination Case | ಹೇವರಿಕೆ ಹುಟ್ಟಿಸುವ ಕೆಲಸವಿದು ಎಂದು ಶಂಕರ್ ಮಿಶ್ರಾಗೆ ಛೀಮಾರಿ ಹಾಕಿದ ನ್ಯಾಯಾಧೀಶೆ; ಜಾಮೀನು ನಿರಾಕರಣೆ

Exit mobile version