Site icon Vistara News

Rap Singer:‌ ಅಭಿಮಾನಿ ತಳ್ಳಿದ್ದಕ್ಕೆ ಹಾಡುತ್ತಿದ್ದಾಗಲೇ ವೇದಿಕೆ ಮೇಲೆ ಬಿದ್ದ ಆಲ್‌ ಓಕೆ ಖ್ಯಾತಿಯ ಕನ್ನಡ ರ‌್ಯಾಪರ್ ಅಲೋಕ್ ಬಾಬು!

Rap singer Alok babu fall in karavali utsav

ಕಾರವಾರ: ಕನ್ನಡದ ಖ್ಯಾತ ರ‍್ಯಾಪ್‌ ಸಾಂಗ್‌ ಗಾಯಕ (Rap Singer), ಆಲ್ ಓಕೆ (All OK) ಖ್ಯಾತಿಯ ಅಲೋಕ್ ಬಾಬು (Alok Babu) ಅವರು ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ನಡೆಯುತ್ತಿದ್ದ ಕರುನಾಡು ಕರಾವಳಿ ಉತ್ಸವದಲ್ಲಿ (Karavali Festival) ಶನಿವಾರ ಭಾಗಿಯಾಗಿದ್ದು, ಹಾಡು ಹೇಳುತ್ತಿದ್ದ ವೇಳೆ ಅಭಿಮಾನಿಯಿಂದ ತಳ್ಳಲ್ಪಟ್ಟು ವೇದಿಕೆ ಮೇಲೆಯೇ ಬಿದ್ದಿದ್ದಾರೆ. ಆದರೂ ನೋ ಪ್ರಾಬ್ಲಂ ಎಂದು ಹಾಡನ್ನು ಮುಂದುವರಿಸಿದ್ದಾರೆ.

ಕನ್ನಡದ ರ‍್ಯಾಪ್‌ ಗಾಯಕರಿಗೆ ಬಹಳವೇ ಬೇಡಿಕೆ ಇದೆ. ಯುವಕರಿಗೆ ಅವರ ಮೇಲೆ ಅಷ್ಟೇ ಕ್ರೇಜ್‌ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಆಯೋಜಿಸಿದ್ದ ಕರಾವಳಿ ಉತ್ಸವದಲ್ಲಿ ಆಲ್ ಓಕೆ ಖ್ಯಾತಿಯ ಅಲೋಕ್ ಬಾಬು ಅವರನ್ನು ಕರೆಸಲಾಗಿತ್ತು.

ಮಯೂರವರ್ಮ ವೇದಿಕೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಅಲೋಕ್ ಬಾಬು ಹಾಡುತ್ತಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಕಾರ್ಯಕ್ರಮವೂ ಚೆನ್ನಾಗಿಯೇ ನಡೆಯುತ್ತಿತ್ತು. ವೇದಿಕೆ ಬಳಿಯೇ ಗುಂಪುಗೂಡಿ ಅಲೋಕ್ ಹಾಡಿಗೆ ಯುವ ಅಭಿಮಾನಿಗಳು ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ವೇದಿಕೆ ಒಬ್ಬ ಅಭಿಮಾನಿ ವೇದಿಕೆಯನ್ನು ಹತ್ತಿದ್ದು, ಅಲೋಕ್‌ ಜತೆ ಕುಣಿಯಲು ಮುಂದಾಗಿದ್ದಾನೆ. ಬಳಿಕ ಅವರನ್ನು ತಬ್ಬಿಕೊಳ್ಳಲು ಹೋಗಿದ್ದಾನೆ. ಆಗ ಪೊಲೀಸರು ತಡೆಯಲು ಬಂದಿದ್ದರಿಂದ ಗಾಬರಿಗೊಂಡ ಆತ ಪಕ್ಕದಲ್ಲಿದ್ದ ಅಲೋಕ್‌ರನ್ನು ತಳ್ಳಿಬಿಟ್ಟಿದ್ದಾನೆ.

ಇದನ್ನೂ ಓದಿ: Child Marriage: ಮಸ್ಕಿಯಲ್ಲಿ ನೆರವೇರಿದ ಬಾಲ್ಯ ವಿವಾಹ; ಬಾಲಕಿಯರಿಬ್ಬರು ಬಾಲಮಂದಿರಕ್ಕೆ ಶಿಫ್ಟ್

ಏಕಾಏಕಿ ಅಭಿಮಾನಿ ತಳ್ಳಿದ್ದರಿಂದ ಅಲೋಕ್‌ ವೇದಿಕೆಯಲ್ಲಿಯೇ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ವೇದಿಕೆಯಲ್ಲಿ ಬಿದ್ದರೂ ನೋ ಪ್ರಾಬ್ಲಮ್ ಎನ್ನುತ್ತಾ ಗಾಯಕ ಅಲೋಕ್‌ ಹಾಡನ್ನು ಮುಂದುವರಿಸಿದ್ದಾರೆ. ಈಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Exit mobile version