ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ರ‍್ಯಾಪಿಡೋ ಬೈಕ್ ಚಾಲಕರು Vs ಆಟೋ ಡ್ರೈವರ್‌ಗಳ ನಡುವಿನ ಸಂಘರ್ಷ ಮುಂದುವರಿದಿದೆ. ಆಟೋ ಡ್ರೈವರ್‌ಗಳ ಕಿರಿಕ್‌ಗೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಪ್ರಯಾಣಿಕರನ್ನು ರ‍್ಯಾಪಿಡೋ ಬೈಕ್ ಚಾಲಕ ಡ್ರಾಪ್ ಮಾಡುವ ವೇಳೆ ಆಟೋ ಚಾಲಕರು ತಡೆದು ಕಿರಿಕ್ ಮಾಡುತ್ತಿರುವುದು ಮತ್ತೊಮ್ಮೆ ವರದಿ ಆಗಿದೆ.
ಕಂಡ ಕಂಡಲ್ಲಿ ಆಟೋ ಚಾಲಕರು ಗುಂಪು ಗುಂಪಾಗಿ ಸೇರಿ ಗೂಂಡಾ ವರ್ತನೆ ತೋರುತ್ತಿರುವುದಕ್ಕೆ ವಿರೋಧಗಳು ಶುರುವಾಗಿದೆ. ರ‍್ಯಾಪಿಡೋ ಬೈಕ್ ಸವಾರರ ಮೇಲೆ ಹಲ್ಲೆಗೆ ಯತ್ನಿಸಿದ್ದು, ರ‍್ಯಾಪಿಡೋ ಚಾಲಕರು ನಲುಗಿ ಹೋಗಿದ್ದಾರೆ. ರ‍್ಯಾಪಿಡೊ ಬೈಕ್‌ಗಳನ್ನು ತಡೆದು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಆಟೋ ಚಾಲಕರ ದೌರ್ಜನ್ಯಕ್ಕೆ ಕಂಗಾಲಾಗಿದ್ದಾರೆ.
ದಿನನಿತ್ಯ ಭಯದಲ್ಲೇ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಎಲ್ಲೂ ಕೆಲಸ ಸಿಗದ ಕಾರಣಕ್ಕೆ ನಿರುದ್ಯೋಗಿಗಳು ಹೊಟ್ಟೆಪಾಡಿಗಾಗಿ ರ‍್ಯಾಪಿಡೊ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಇತ್ತ ಆಟೋ ಚಾಲಕರು ಹೆಚ್ಚಿನ ಹಣದ ಬೇಡಿಕೆ, ತುರ್ತು ಅಗತ್ಯವಿದ್ದರೂ ಕರೆದಲ್ಲಿ ಬಾರದೆ ಇರುವುದಕ್ಕೆ ಪ್ರಯಾಣಿಕರು ಅನಿವಾರ್ಯವಾಗಿ ರ‍್ಯಾಪಿಡೊ ಮೊರೆ ಹೋಗುತ್ತಿದ್ದಾರೆ. ಚಾಲಕರು ಮಾತ್ರವಲ್ಲದೇ ಗ್ರಾಹಕರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬಂದಿದೆ.
ಈ ಹಿಂದೆ ಫೆ.15ರಂದು ಯುವತಿಯೊಬ್ಬಳನ್ನೂ ರ‍್ಯಾಪಿಡೋ ಬೈಕ್ ಚಾಲಕ ಡ್ರಾಪ್ ಮಾಡುವ ವೇಳೆ ಆಟೋ ಚಾಲಕನೊಬ್ಬ ತಡೆದು ಕಿರಿಕ್ ಮಾಡಿದ್ದ. ಈ ಸಂಬಂಧ ಅಮೃತ ಎಂಬುವವರು ತಮ್ಮ ಟ್ವಿಟರ್ ಖಾತೆ ಮೂಲಕ ಬೆಂಗಳೂರು ನಗರ ಪೊಲೀಸರಿಗೆ ವಿಡಿಯೊ ಸಹಿತ ಟ್ವೀಟ್ ಮಾಡಿ ದೂರಿದ್ದರು. ಆಟೋ ಚಾಲಕನ ದೌರ್ಜನ್ಯವನ್ನು ಖಂಡಿಸಿ, ಚಾಲಕರ ನಡುವಿನ ಸಮಸ್ಯೆಯಿಂದಾಗಿ ಪ್ರಯಾಣಿಕರು ಕಷ್ಟಕ್ಕೆ ಸಿಲುಕುವಂತಾಗಿದೆ ಎಂದಿದ್ದರು. ಘಟನೆಯಲ್ಲಿ ಆಟೋ ಚಾಲಕ, ಬೈಕ್ ಚಾಲಕನಿಂದ ಕೀ ಯನ್ನು ಕಸಿದುಕೊಂಡು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು.
ಇದನ್ನೂ ಓದಿ: Amit Shah visit : ಅಮಿತ್ ಶಾ ಬೆನ್ನು ತಟ್ಟಿ ಮಾತಾಡಿಸಿದ್ದರಿಂದ ಆನೆ ಬಲ ಬಂದಿದೆ ಎಂದ ಬಿ.ವೈ ವಿಜಯೇಂದ್ರ
ಬೈಕ್ ಟ್ಯಾಕ್ಸಿಗೆ ವಿರೋಧಿಸಿ ಆಟೋ ಸೇವೆ ಸ್ಥಗಿತ ಮಾಡಿದ್ದ ಚಾಲಕರು
ಅನಧಿಕೃತ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿಯಿಂದಾಗಿ ಆಟೋರಿಕ್ಷಾ ಚಾಲಕರ ದುಡಿಮೆಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರು ಆಟೋ ಚಾಲಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಮಾ.20ರಂದು ಇಡೀ ದಿನ ಬೆಂಗಳೂರಲ್ಲಿ ಆಟೋ ಸೇವೆಯನ್ನು (Bengaluru Auto Bandh) ಬಂದ್ ಮಾಡಿ ಮುಷ್ಕರಕ್ಕೆ ಕರೆ ಕೊಟ್ಟಿತ್ತು. ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಲಾಗಿತ್ತು. ಈಗಾಗಲೇ ದೆಹಲಿ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಬಹಿಷ್ಕಾರ ಮಾಡಲಾಗಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ