Site icon Vistara News

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

rapido bike vs auto-Bike taxi drivers go on strike against auto drivers harassment

rapido bike vs auto-Bike taxi drivers go on strike against auto drivers harassment

ಬೆಂಗಳೂರು: ಆಟೋ ಚಾಲಕರ (Auto Drivers) ವಿರುದ್ಧ ಬೈಕ್‌ ಟ್ಯಾಕ್ಸಿ ಚಾಲಕರು (Bike Taxi) ಸಿಡಿದೆದ್ದಿದ್ದಾರೆ. ಆಟೋ ಚಾಲಕರಿಂದ (Rapido Bike Vs Auto) ನಮಗೆ ರಕ್ಷಣೆ ಕೊಡಿ ಎಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೈಕ್ ಟ್ಯಾಕ್ಸಿ ಅಸೋಸಿಯೇಶನ್ (Bike Taxi Association) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸುಮಾರು 1 ಸಾವಿರ ಬೈಕ್ ಟ್ಯಾಕ್ಸಿ ಚಾಲಕರು ಭಾಗಿಯಾಗಿದ್ದಾರೆ.

ನಗರದಲ್ಲಿ ಆಟೋ ಚಾಲಕರು ಸಿಕ್ಕ ಸಿಕ್ಕ ಬೈಕ್‌ ಟ್ಯಾಕ್ಸಿ ಚಾಲಕರನ್ನು ತಡೆದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಬೈಕ್ ಚಾಲಕನ ಹೆಲ್ಮೆಟ್‌ ಕಸಿದ ಆಟೋ ಡ್ರೈವರ್ ಒಬ್ಬ ಅದನ್ನು ಒಡೆದು ಹಾಕಿದ್ದಾನೆ. ಆಟೋ ಚಾಲಕರಿಂದ ನಿರಂತರವಾಗಿ ದೌರ್ಜನ್ಯ ಮುಂದುವರಿದಿದೆ. ಜೀವನ ನಡೆಸಲು ಹೊಟ್ಟೆ ಪಾಡಿಗೆ ಎಷ್ಟೋ ಜನ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ನಾವು ಯಾರಿಗೂ ಕಾಟ ಕೊಟ್ಟಿಲ್ಲ, ಆದರೆ ನಮ್ಮನ್ನು ಪ್ರಚೋದನೆ ಮಾಡುವ ಕೆಲಸ ಆಗುತ್ತಿದೆ ಎಂದು ಪ್ರತಿಭಟನಾ ನಿರತರು ಅಸಮಾಧಾನ ಹೊರಹಾಕಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಬೈಕ್‌ ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಆಟೋ ಚಾಲಕರು ಅವರ ಸಮಸ್ಯೆಗಾಗಿ ಸಾರಿಗೆ ಇಲಾಖೆ ಹಾಗೂ ಸರ್ಕಾರದ ಜತೆ ಮಾತನಾಡಿ ಚರ್ಚೆ ಮಾಡಲಿ. ಅದನ್ನು ಬಿಟ್ಟು ನಮ್ಮ ಮೇಲೆ ದೌರ್ಜನ್ಯ ಮಾಡಿದರೆ ಏನು ಪ್ರಯೋಜನ ಎಂದು ಕಿಡಿಕಾರಿದ್ದಾರೆ. ನಾವು ಕಾನೂನು ಅನುಸರಿಸಿಯೇ ಜನರಿಗೆ ಸೇವೆ ಕೊಡುತ್ತಿದ್ದೇವೆ. ಸರ್ಕಾರ ನಮಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬೈಕ್‌ ಟ್ಯಾಕ್ಸಿಗೆ ಆಟೋ ಚಾಲಕರ ವಿರೋಧ

ಅನಧಿಕೃತ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಯಿಂದಾಗಿ ಆಟೋರಿಕ್ಷಾ ಚಾಲಕರ ದುಡಿಮೆಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರು ಆಟೋ ಚಾಲಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಮಾ.20ರಂದು ಇಡೀ ದಿನ ಬೆಂಗಳೂರಲ್ಲಿ ಆಟೋ ಸೇವೆಯನ್ನು (Bengaluru Auto Bandh) ಬಂದ್‌ ಮಾಡಿತ್ತು. ಈಗಾಗಲೇ ದೆಹಲಿ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಬೈಕ್‌ ಟ್ಯಾಕ್ಸಿಗಳನ್ನು ಬಹಿಷ್ಕಾರ ಮಾಡಲಾಗಿದ್ದು, ರಾಜ್ಯದಲ್ಲೂ ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಯನ್ನು ಬ್ಯಾನ್‌ ಮಾಡುವಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ: Blackmail Case: ಯುವತಿಯ ಫೋಟೊ ಕ್ಲಿಕ್‌; ಪ್ರಶ್ನಿಸಲು ಹೋದ ತಾಯಿಗೆ ಬೆದರಿಕೆ ಹಾಕಿದ ಮಹಿಳೆ

ಇಬ್ಬರ ಜಗಳದಲ್ಲಿ ಪ್ರಯಾಣಿಕರು ಕಂಗಾಲು

ರಾಜಧಾನಿ ಬೆಂಗಳೂರಲ್ಲಿ ರ‍್ಯಾಪಿಡೋ ಬೈಕ್‌ ಚಾಲಕರು Vs ಆಟೋ ಡ್ರೈವರ್‌ಗಳ ನಡುವಿನ ಸಂಘರ್ಷಕ್ಕೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಪ್ರಯಾಣಿಕರನ್ನು ರ‍್ಯಾಪಿಡೋ ಬೈಕ್ ಚಾಲಕರು ಡ್ರಾಪ್‌ ಮಾಡುವ ವೇಳೆ ಆಟೋ ಚಾಲಕರು ತಡೆದು ಹಲ್ಲೆ ಮಾಡುತ್ತಿರುವುದು ವರದಿ ಆಗುತ್ತಲೇ ಇದೆ. ಮಧ್ಯಸ್ಥಿಕೆ ವಹಿಸಬೇಕಾದ ಸರ್ಕಾರ ಹಾಗೂ ಸಾರಿಗೆ ಇಲಾಖೆ ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version