ಶಿವಮೊಗ್ಗ : “ಕೋರಿಕೆಯಂತೆ ಅಹ್ಮದಾಬಾದ್ ನಂತರ ದೇಶದ ಎರಡನೇ ರಕ್ಷಾ ವಿಶ್ವವಿದ್ಯಾಲಯವು (Rashtriya Raksha VV) ಶಿವಮೊಗ್ಗಕ್ಕೆ ಮಂಜೂರಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಕಾರ್ಯಾರಂಭಗೊಳ್ಳಲಿದೆ” ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರು ಮಂಗಳವಾರ (ಫೆ.28) ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಿ, “ವಿವಿ ಆರಂಭಿಸಲು ತಾತ್ಕಾಲಿಕವಾಗಿ ರಾಗಿ ಗುಡ್ಡದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕಟ್ಟಡವನ್ನು ಗುರುತಿಸಲಾಗಿದೆ. ಶಾಶ್ವತ ಕಟ್ಟಡ ನಿರ್ಮಿಸಲು ಅಗತ್ಯವಿರುವ 8 ಎಕರೆ ನಿವೇಶನವನ್ನು ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ನವುಲೆಯ ಸರ್ವೆ ನಂ.112ರಲ್ಲಿ ಗುರುತಿಸಲಾಗಿದ್ದು, ಸ್ಥಳವನ್ನು ವಿಶ್ವವಿದ್ಯಾಲಯ ಮಂಜೂರಾತಿ ಪ್ರಾಧಿಕಾರದ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿ, ಒಪ್ಪಿಗೆ ಸೂಚಿಸಿದೆ. ಜಿಲ್ಲಾಧಿಕಾರಿಗಳು ಭೂಮಿ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯವು ಹಂತಹಂತವಾಗಿ ಆರಂಭಗೊಳ್ಳಲಿದೆ” ಎಂದರು.
ಇದನ್ನೂ ಓದಿ: ಆಕಾಶದಲ್ಲಿ ಚಂದ್ರ, ಶುಕ್ರ, ಗುರು ಗ್ರಹಗಳ ಸಮಾಗಮ! ನೀವು ನೋಡಿದ್ದೀರಾ?
“ಆರಂಭದ ಹಂತದಲ್ಲಿ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್, ಬೇಸಿಕ್ ಕೋರ್ಸ್ ಇನ್ ಕಾರ್ಪೊರೇಟ್ ಸೆಕ್ಯೂರಿಟಿ ಮ್ಯಾನೇಜ್‍ಮೆಂಟ್, ಡಿಪ್ಲೊಮಾ ಇನ್ ಕ್ರಿಮಿನಲ್ ಇನ್ವೆಸ್ಟಿಗೇಷನ್, ಪಿ.ಜಿ.ಡಿಪ್ಲೊಮಾ ಸೈಬರ್ ಸೆಕ್ಯೂರಿಟಿ ಅಂಡ್ ಸೈಬರ್ ಲಾ, ರೋಡ್ ಟ್ರಾಫಿಕ್ ಸೇಪ್ಟಿ ಮ್ಯಾನೇಜ್‍ಮೆಂಟ್, ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಸರ್ಟಿಫಿಕೆಟ್ ಕೋರ್ಸ್, ಪೋಸ್ಟ್ ಗ್ರಾಜುಯೇಶನ್ ಡಿಪ್ಲೊಮಾ ಇನ್ ಕೋಸ್ಟಲ್ ಸೆಕ್ಯುರಿಟಿ ಅಂಡ್ ಲಾ ಎನ್‍ಫೋರ್ಸ್‍ಮೆಂಟ್ ಸೇರಿದಂತೆ ದೀರ್ಘಾವಧಿಯ ಹಾಗೂ ಅಲ್ಪಾವಧಿಯ ತರಗತಿಗಳು ನಡೆಯಲಿವೆ” ಎಂದರು.
ಇದನ್ನೂ ಓದಿ: Rishabh Pant: ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳುವೆ; ರಿಷಭ್ ಪಂತ್ ವಿಶ್ವಾಸ
ಪಿ.ಯು.ಸಿ. ವಿದ್ಯಾರ್ಹತೆ ಹೊಂದಿದ್ದು, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ನಿಗದಿಪಡಿಸಿದ ನಿಬಂಧನೆಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳನ್ನು ಡಿಪ್ಲೊಮಾ ಮತ್ತು ಪದವಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಂತೆಯೇ ಪದವಿ ವಿದ್ಯಾರ್ಥಿಗಳನ್ನು ಸ್ನಾತಕೋತ್ತರ ಪದವಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಇಲ್ಲಿನ ವಿದ್ಯಾರ್ಥಿಗಳು ಕೇವಲ ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಬೇರೊಂದು ಹಾಗೂ ಉದ್ಯೋಗದ ಭದ್ರತೆ ಒದಗಿಸುವ ವಿಷಯವೊಂದು ಪರಿಚಯಿಸಿದಂತಾಗಲಿದೆ. ಈ ತರಬೇತಿಯಿಂದಾಗಿ ದೇಶದ ಸೈನಿಕ ಸೇವೆಗೆ, ದೇಶದ ಆಂತರಿಕ ಭದ್ರತಾ ವಿಭಾಗದಲ್ಲಿ ಸೇವೆ ಸಲ್ಲಿಸಲಿಚ್ಛಿಸುವವರಿಗೆ ಈ ತರಬೇತಿ ಸಹಕಾರಿಯಾಗಲಿದೆ. ಮಾತ್ರವಲ್ಲ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹೊಸ ದಿಕ್ಕನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ” ಎಂದರು.