ಶಿವಮೊಗ್ಗ: ನಗರದ ನವುಲೆಯ ಸ.ನಂ 112 ರಲ್ಲಿ ಕಾಯ್ದಿರಿಸಲಾಗಿರುವ 8 ಎಕರೆ ಭೂಮಿಯಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (Rashtriya Raksha VV) ದೇಶದ 3ನೇ ಕ್ಯಾಂಪಸ್ ಅನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾ.24 ರಂದು ಶಿವಮೊಗ್ಗದ ನವುಲೆಯಲ್ಲಿರುವ ಹಳೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ ಅವರು, “ಗುಜರಾತಿನ ಗಾಂಧಿನಗರದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಈ ವಿಶ್ವವಿದ್ಯಾಲಯವು ಅರುಣಾಚಲ ಪ್ರದೇಶದಲ್ಲಿ 2ನೇ ಕ್ಯಾಂಪಸ್ ಅನ್ನು ಹೊಂದಿದ್ದು, ಶಿವಮೊಗ್ಗದಲ್ಲಿ ಸ್ಥಾಪನೆಗೊಳ್ಳುತ್ತಿರುವುದು 3 ನೇ ಕ್ಯಾಂಪಸ್ ಆಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಪ್ರೊ. ಉಪ ಕುಲಪತಿ ಡಾ. ಆನಂದ ಕುಮಾರ್ ತ್ರಿಪಾಠಿ ಅವರ ನೇತೃತ್ವದಲ್ಲಿ ಡಾ. ಧನುಷ್ ಕುಮಾರ್ ಪ್ರಜಾಪತಿ, ಸಹಾಯಕ ಕುಲಸಚಿವರು, ವಿಶ್ವ ಪ್ರತಾಪ್ ಸಿಂಗ್ ಶೇಕಾವತ್, ಕ್ಯಾಂಪಸ್ ನಿರ್ದೇಶಕರು ಹಾಗೂ ಆತೀಷ್ ಬಾರೋಟ್, ಆಡಳಿತಾಧಿಕಾರಿಗಳ ನಾಲ್ಕು ಜನರ ತಂಡವು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಮಾ24 ರ ಕಾರ‍್ಯಕ್ರಮದ ಎಲ್ಲ ಪೂರ್ವ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ” ಎಂದವರು ತಿಳಿಸಿದ್ದಾರೆ.
“ಉದ್ಯೋಗ ಅರಸುತ್ತಿರುವ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲು ಸಹಾಯಕವಾಗುವಂತಹ ಮಹತ್ತರವಾದ ಈ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಡಿಪ್ಲೊಮೋ ಇನ್ ಪೊಲೀಸ್ ಸೈನ್ಸ್, ಪಿ.ಜಿ. ಡಿಪ್ಲೊಮೋ ಸೈಬರ್ ಸೆಕ್ಯುರಿಟಿ ಆ್ಯಂಡ್ ಸೈಬರ್ ಲಾ, ಬೇಸಿಕ್ ಕೋರ‍್ಸ್ ಇನ್ ಕರ‍್ಪೋರೇಟ್ ಸೆಕ್ಯುರಿಟಿ ಮ್ಯಾನೇಜ್ಮೆಂಟ್, ರ‍್ಟಿಫಿಕೇಟ್ ಕೋರ‍್ಸ್ ಇನ್ ಕೋಸ್ಟಲ್ ಸೆಕ್ಯುರಿಟಿ & ಲಾ ಎನ್ಫೋರ‍್ಸ್ಮೆಂಟ್, ಟೂ ವೀಕ್ಸ್ ಸರ‍್ಟಿಫಿಕೇಶನ್ ಫ್ರೋಗ್ರಾಂ ಇನ್ ರೋಡ್ ಟ್ರಾಫಿಕ್ ಸೇಫ್ಟಿ ಮ್ಯಾನೇಜ್ಮೆಂಟ್, ಮತ್ತು ಟೂ ವೀಕ್ಸ್ ಸರ‍್ಟಿಫಿಕೇಶನ್ ಫ್ರೋಗ್ರಾಂ ಇನ್ ಫಿಸಿಕಲ್ ಫಿಟ್ನೆಸ್ ಮ್ಯಾನೇಜ್ಮೆಂಟ್ ಕೋರ್ಸ್‌ಗಳನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲಾಗುತ್ತಿದೆ. ಇದೇ ಶೈಕ್ಷಣಿಕ ವರ್ಷದಿಂದ ಅಂದರೆ ಆಗಸ್ಟ್‌ನಿಂದಲೇ ಪ್ರಾರಂಭಗೊಳ್ಳಲಿದೆ” ಎಂದಿದ್ದಾರೆ.
ಇದನ್ನೂ ಓದಿ: JDS Politics: ದೇವೇಗೌಡರ ಸಭೆ ನಂತರವೂ ಬಗೆಹರಿಯದ ಹಾಸನ ಟಿಕೆಟ್ ಸಂಘರ್ಷ: ಮತ್ತೆ ಸಭೆ ನಡೆಸಿದ ಮಾಜಿ ಪ್ರಧಾನಿ
“ಈ ರೀತಿಯ ಕೋರ್ಸ್‌ಗಳನ್ನು ಮಾಡಿಕೊಳ್ಳುವ ಯುವಕ/ಯುವತಿಯರಿಗೆ ಪೊಲೀಸ್ ಸೇವೆ, ಶಸ್ತ್ರಸಜ್ಜಿತ ಸೇವೆಗಳಿಗೆ ಸೇರಲು ಬೇಕಾಗಿರುವಂತಹ ತರಬೇತಿ ಸಿಗುವುದರ ಜತೆಗೆ ಹಾಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಬೇಕಾಗಿರುವಂತಹ ತರಬೇತಿ ಮತ್ತು ಸಂಶೋಧನೆಗಳನ್ನು ನಡೆಸಲು ಸಹ ಇದು ಸಹಕಾರಿಯಾಗಲಿದೆ” ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.