ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಹೆಚ್ಚಾಗುತ್ತಿದ್ದು, ಕೆಲವರಂತೂ ತಾವು ಎಲ್ಲಿದ್ದೇವೆ ಎನ್ನುವುದನ್ನೇ ಮರೆತು ರೀಲ್ಸ್‌ನಲ್ಲಿ ಬೀಳುತ್ತಾರೆ. ಕೆಲವರು ಅಪಾಯವನ್ನು ಎದುರಿಸಿಯೂ ಇದ್ದಾರೆ. ದಾವಣಗೆರೆ ಜಿಲ್ಲೆಯ ಹರಗನಹಳ್ಳಿ ಚೆಕ್ ಡ್ಯಾಂ ಬಳಿ ರೀಲ್ಸ್ ಮಾಡಲು ಹೋದ ಇಬ್ಬರು ಯುವಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಹರಿಹರದ ಆಶ್ರಯ ಬಡಾವಣೆ ಪವನ್ (25), ಪ್ರಕಾಶ್ (24) ಇಬ್ಬರು ಸ್ನೇಹಿತರಾಗಿದ್ದು, ರೀಲ್ಸ್ ಮಾಡುವ ಹುಚ್ಚು ಹೊಂದಿದ್ದರು. ಅವರು ರೀಲ್ಸ್ ಮಾಡುವುದಕ್ಕಾಗಿ ಹರಿಹರ ಸಮೀಪದ ಹರಗನಹಳ್ಳಿ ಚೆಕ್ ಡ್ಯಾಂ ಬಳಿಗೆ ಹೋಗಿದ್ದರು. ಅಲ್ಲಿ ರೀಲ್ಸ್ ಮಾಡುತ್ತಿದ್ದಾಗ ಒಬ್ಬ ಮುಳುಗಿದ್ದು, ಇನ್ನೊಬ್ಬ ಅವನನ್ನು ರಕ್ಷಿಸಲು ಹೋಗಿದ್ದಾನೆ. ಇಬ್ಬರೂ ಒಟ್ಟಿಗೇ ನೀರುಪಾಲಾಗಿದ್ದಾರೆ.
ರೀಲ್ಸ್ ಮಾಡಲು ಹೋದ ಪ್ರಕಾಶ್ ಮೊದಲು ಬಿದ್ದರೆ, ಆತನನ್ನು ರಕ್ಷಿಸಲು ಹೋಗಿ ಪವನ್ ಸಹ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದ. ಮೂರುದಿನಗಳ ಹಿಂದೆ ಈ ಘಟನೆ ನಡೆದಿದ್ದು, ಹರಿಹರದ ರಾಘವೇಂದ್ರ ಮಠದ ಬಳಿ ಒಬ್ಬನ ಶವ ಶನಿವಾರ ಪತ್ತೆಯಾಗಿದೆ. ಇವರಿಬ್ಬರು ರೀಲ್ಸ್ ಮಾಡುತ್ತಾ ನೀರುಪಾಲಾದ ಸನ್ನಿವೇಶವನ್ನು ಇನ್ನೊಬ್ಬ ಸ್ನೇಹಿತ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಅಗ್ನಿ ಶಾಮಕ ಮತ್ತು ಪೊಲೀಸರು ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ.
ಭಟ್ಕಳ ಬಳಿ ಟೆಂಪೋಗೆ ಹಿಂಬದಿಯಿಂದ ಐರಾವತ ಬಸ್ ಡಿಕ್ಕಿ
ಕಾರವಾರ: ಉತ್ತರ ಕನ್ನಡದ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಶಿರಾಲಿ ಗ್ರಾಮದ ಬಳಿ ಕಾರವಾರದಿಂದ ಮಂಗಳೂರು ಕಡೆ ಹೊರಟಿದ್ದ ಬಸ್ ಟೆಂಪೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್‌ನ ಮುಂಭಾಗದಲ್ಲಿದ್ದ ಮೂವರಿಗೆ ಗಾಯವಾಗಿದೆ.
ಬಸ್‌ನಲ್ಲಿ ೫೦ಕ್ಕೂ ಅಧಿಕ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.