Site icon Vistara News

ಕ್ರಿಮಿನಲ್‌ ವಿಚಾರಣೆಗೆ ಸುಪ್ರೀಂ ತಡೆ; ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ನಾಯಕರಿಗೆ ರಿಲೀಫ್

Relief for Congress leaders, including CM Siddaramaiah in criminal case

ಬೆಂಗಳೂರು: ಪ್ರತಿಭಟನಾ ಮೆರವಣಿಗೆ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ 2022ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ (congress protest) ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿದ್ದು, ಮುಂದಿನ ಆದೇಶದವರೆಗೆ ಕ್ರಿಮಿನಲ್‌ ವಿಚಾರಣೆಗೆ ತಡೆ ನೀಡಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಸೇರಿ ವಿವಿಧ ಕೈ ನಾಯಕರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

2022ರಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ಇತ್ತೀಚೆಗೆ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪ್ರಶಾಂತ್ ಕುಮಾ‌ರ್ ಮಿಶ್ರಾ ಅವರಿದ್ದ ಪೀಠವು ಈ ಕುರಿತು ವಿಚಾರಣೆ ನಡೆಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಶಾಂತಿಯುತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಇದು ರಾಜಕೀಯ ಪ್ರತಿಭಟನೆ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ.

ರಾಜಕೀಯ ಪಕ್ಷಗಳ ಪ್ರತಿಭಟನೆಗೆ ಸೆಕ್ಷನ್ 141 ಹಾಕಲಾಗಿದೆ ಎಂದು ತಿಳಿಸಿದಾಗ, ಪಕ್ಷಗಳ ಪ್ರತಿಭಟನೆ ಎಂದ ಕೂಡಲೇ ಕೇಸ್ ವಜಾ ಮಾಡಬೇಕಾ? ನೀವು ಧರಣಿಗೆ ಅನುಮತಿ ಪಡೆದಿದ್ರಾ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಪ್ರತಿಭಟಿಸುವುದು ಮೂಲಭೂತ ಹಕ್ಕು, ಪ್ರತಿಭಟನೆ ಮಾಡುವುದು ಅಪರಾಧವಲ್ಲ ಎಂದು ಕಪಿಲ್ ಸಿಬಲ್ ತಿಳಿಸಿದ್ದಾರೆ. ಹೀಗಾಗಿ ದೂರುದಾರರಿಗೆ ಕುರಿತು ವರದಿ ಸಲ್ಲಿಸುವಂತೆ 6 ವಾರ ಕಾಲಾವಕಾಶ ನೀಡಿ, ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಅಲ್ಲದೇ ಪ್ರಕರಣದ ಮುಂದಿನ ವಿಚಾರಣೆಗೆ ತಡೆ ನೀಡಿದ್ದು, ಅರ್ಜಿದಾರರಿಗೆ ತಲಾ 10,000 ರೂ.ಗಳ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೂ ತಡೆ ನೀಡಲಾಗಿದೆ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಿಂದಾಗಿ ಫೆ.26 ರಂದು ಕೋರ್ಟ್ ಹಾಜರಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ | Residential Schools: ವಸತಿ ಶಾಲೆಯ ಘೋಷವಾಕ್ಯ ಬದಲು; ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲವೆಂದ ಡಿಕೆಶಿ

ಪ್ರಕರಣದ ಹಿನ್ನೆಲೆ?

2022ರಲ್ಲಿ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಡೆತ್‌ ನೋಟ್‌ನಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆಎಸ್‌ ಈಶ್ವರಪ್ಪ ಅವರ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆ ಕೆ.ಎಸ್‌. ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ 2022ರ ಏಪ್ರಿಲ್‌ನಲ್ಲಿ ವಿಧಾನಸೌಧದ ಬಳಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ, ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಗಿತ್ತು. ಈ ಹಿನ್ನೆಲೆ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

Exit mobile version