Site icon Vistara News

Republic day 2023 : ಚಾಮರಾಜಪೇಟೆ ಮೈದಾನದಲ್ಲಿ ನಡೆಯಿತು ಗಣರಾಜ್ಯೋತ್ಸವ, ಇನ್ನು ಎಲ್ಲ ಹಬ್ಬವೂ ನಡೀತದೆ ಅಂದ್ರು ಪಿ.ಸಿ. ಮೋಹನ್‌

Republic day- 2023, Chamarajapet

ಬೆಂಗಳೂರು: ರಾಜಧಾನಿಯ ವಿವಾದಿತ ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಅದ್ಧೂರಿಯಾಗಿಯೇ ನಡೆಯಿತು. ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಡಾ. ಎಂ.ಜೆ ಶಿವಣ್ಣ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು. ಸರ್ಕಾರ ಕೇವಲ ತ್ರಿವರ್ಣ ಧ್ವಜಾರೋಹಣ ಮಾತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಹೇಳಿತ್ತಾದರೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿದವು. ಆ ಮೂಲಕ ಕಳೆದ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂತೆ ಬಿಗುವಿನ ವಾತಾವರಣ ಇರಲಿಲ್ಲ.

ಚಾಮರಾಜ ಪೇಟೆ ಮೈದಾನದಲ್ಲಿ ವರ್ಷಕ್ಕೆರಡು ಬಾರಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಬಿಟ್ಟರೆ ಬೇರೆ ಯಾವ ಕಾರ್ಯಕ್ರಮವೂ ನಡೆಯುತ್ತಿರಲಿಲ್ಲ. ಈ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬ ಅಂಶ ಚರ್ಚೆಗೆ ಬಂದ ಬಳಿಕ ಇಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಕೇಳಿಬಂತು. ಹಾಗೆ ೨೦೨೨ರಲ್ಲಿ ಸಿಕ್ಕಿದ ಅವಕಾಶ ಈಗ ಗಣರಾಜ್ಯೋತ್ಸವಕ್ಕೂ ಮುಂದುವರಿದಿದೆ. ಆದರೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಆದರೆ, ಗುರುವಾರ ಗಣರಾಜ್ಯೋತ್ಸವದ ಬಳಿಕ ಬಳಿಕ ಮಾತನಾಡಿದ ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ. ಮೋಹನ್‌ ಅವರು ಮುಂದಿನ ದಿನಗಳಲ್ಲಿ ಇಲ್ಲಿ ಎಲ್ಲ ಸಾಂಸ್ಕೃತಿಕ ಹಬ್ಬಗಳನ್ನು ಮಾಡುವುದಾಗಿ ಹೇಳಿದರು.

ಅತ್ಯಂತ ಬಿಗಿ ಭದ್ರತೆಯ ನಡುವೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಜಮೀರ್ ಅಹ್ಮದ್, ಸಂಸದರಾದ ಪಿಸಿ ಮೋಹನ್ ಭಾಗಿಯಾಗಿದ್ದರು. 100ಕ್ಕೂ ಅಧಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬ್ಯಾಂಡ್ ಸೆಟ್, ಕಂಸಾಳೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿತ್ತು. ಸಂತ ತೆರೆಸಾ ಬಾಲಕಿಯರ ಶಾಲೆ, ಚಾಮರಾಜಪೇಟೆ ಬಾಲಕಿಯರ ಶಾಲೆ, ಸರ್ಕಾರಿ ಕನ್ನಡ, ಆಂಗ್ಲ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಐದು ಶಾಲಾ ಮಕ್ಕಳು ಭಾಗಿಯಾಗಿದ್ದರು.

ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಹಬ್ಬ
ʻʻಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಇದೇ ಮೊದಲು ನಾವು ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವ ಸಂಭ್ರಮ ಆಚರಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನೂ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡುತ್ತೇವೆ. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಎಲ್ಲಾ ಸಂಸ್ಕೃತಿಕ ಹಬ್ಬಗಳನ್ನು ಆಚರಣೆ ಮಾಡಲಿದ್ದೇವೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆʼʼ ಎಂದು ಸಂಸದ ಪಿ.ಸಿ. ಮೋಹನ್‌ ಹೇಳಿದರು.

ಮೊದಲೇ ಮನವಿ ಮಾಡಿದ್ದೆ
ಗಣರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿ ಕಂದಾಯ ಇಲಾಖೆಗೆ, ಮುಖ್ಯ ಮಂತ್ರಿಗಳಿಗೆ ಹಿಂದೆಯೇ ಪತ್ರ ಬರೆದಿದ್ದೆ. ಗಣರಾಜ್ಯೋತ್ಸವ ಆಚರಣೆ ಮಾಡಿದ್ದು ತುಂಬಾ ಖುಷಿ ಆಗುತ್ತಿದೆ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ ಹೇಳಿದರು. ಹಿಂದು ಹಬ್ಬಗಳ ಆಚರಣೆ ಬಗ್ಗೆ ಕೇಳಿದಾಗ ಗರಂ ಆದ ಶಾಸಕರು, ʻʻಇದು ನನ್ನ ಸ್ವತ್ತಲ್ಲ. ಕಂದಾಯ ಇಲಾಖೆ ಸ್ವತ್ತು. ಈ ಬಗ್ಗೆ ಕಂದಾಯ ಸಚಿವರನ್ನು ಕೇಳಿ.. ನನ್ನನ್ಯಾಕೆ ಕೇಳ್ತೀರಿʼʼ ಎಂದು ಪ್ರಶ್ನಿಸಿದರು.

ಈ ಬಾರಿ ಎಲ್ಲವೂ ಗೊಂದಲದಲ್ಲೇ ನಡೆಯಿತು. ಸರ್ಕಾರದ ಜತೆ ಒಂದು ತಿಂಗಳಿನಿಂದ ಸಂಪರ್ಕದಲ್ಲಿದ್ದರೂ ಬುಧವಾರ ಸಂಜೆವರೆಗೂ ಆರ್ಡರ್‌ ಬಂದಿಲ್ಲ ಅನ್ನುತ್ತಲೇ ಇದ್ದರು. ಇಂದಿನ ಕಾರ್ಯಕ್ರಮದ ರೂಪುರೇಷೆಯೇ ಸ್ಪಷ್ಟವಾಗಿರಲಿಲ್ಲ. ಮುಂದಿನ ಸಾರಿ ಹಾಗಾಗದಂತೆ ನೋಡಿಕೊಳ್ಳಬೇಕು. ಮುಂದೆ ನಮ್ಮ ರಾಜ್ಯದ ಹಬ್ಬಗಳನ್ನು, ನಾಡ ಹಬ್ಬವನ್ನು ಆಚರಣೆ ಮಾಡಲು ಒತ್ತಾಯ ಮಾಡುತ್ತೇವೆ ಎಂದು ನಾಗರಿಕ ಒಕ್ಕೂಟದ ಸದಸ್ಯರು ಹೇಳಿದರು.
ಇದರ ನಡುವೆಯೇ ಸನಾತನ ಹಿಂದು ಧರ್ಮಕ್ಕೆ ಜೈ ಎಂಬ ಘೋಷಣೆಗಳೂ ಮೊಳಗಿದವು.

ಇದನ್ನೂ ಓದಿ | Republic Day 2023 : ಗಣರಾಜ್ಯೋತ್ಸವ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

Exit mobile version