Site icon Vistara News

Republic Day 2023: ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ಭಾರತೀಯ ನೌಕಾದಳ ಮುನ್ನಡೆಸಲಿರುವ ಮಂಗಳೂರಿನ ಕುವರಿ

ಮಂಗಳೂರು: ಗಣರಾಜ್ಯೋತ್ಸವ (Republic Day 2023) ಪರೇಡ್‌ನಲ್ಲಿ ಮಂಗಳೂರಿನ ಕುವರಿ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ನೌಕಾದಳದ ಮುಂದಾಳತ್ವವನ್ನು ವಹಿಸಲಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ನೌಕಾಪಡೆಯ 144 ಯೋಧರು ಹಾಗೂ ನಾರಿ ಶಕ್ತಿಯ ಸ್ತಬ್ಧ ಚಿತ್ರ ಇರುವ ನೌಕಾದಳದ ತುಕಡಿಯನ್ನು ದಿಶಾ ಮುನ್ನಡೆಸಲಿದ್ದಾರೆ.

ಮೂವರು ಮಹಿಳಾ ಅಧಿಕಾರಿಗಳು ಹಾಗೂ ಐವರು ಅಗ್ನಿವೀರರು ಇವರ ಜತೆ ಭಾಗವಹಿಸಲಿದ್ದಾರೆ. ಮಹಿಳೆಯರ ಸಾಧನೆಯನ್ನು ಬಿಂಬಿಸುವ ಸ್ತಬ್ಧ ಚಿತ್ರ ಇರಲಿದ್ದು, ನೌಕಾಪಡೆಯ ಯುದ್ಧ ವಿಮಾನದ ಪ್ರದರ್ಶನವೂ ಇರಲಿದೆ. ಮೂಲತಃ ಮಂಗಳೂರಿನವರಾಗಿರುವ ದಿಶಾ ಅಮೃತ್ 2015ರಲ್ಲಿ ನೌಕಾಪಡೆ ಸೇರಿದ್ದರು. ಬಳಿಕ 2018ರಲ್ಲಿ ಅಂಡಮಾನ್ ಮುತ್ತು ನಿಕೋಬಾರ್ ದ್ವೀಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನೌಕಾಪಡೆಯ ವಿಮಾನ ಚಲಾಯಿಸುವುದರಲ್ಲೂ ಪರಿಣಿತಿ ಪಡೆದಿರುವ ದಿಶಾ ದೇಶದ ಕೆಲವೊಂದು ಮಿಷನ್‌ಗಳಲ್ಲೂ ಭಾಗಿಯಾಗಿದ್ದರು. ಬಾಲ್ಯದಿಂದಲೂ ಸೇನೆಗೆ ಸೇರಬೇಕು ಎಂದು ಕನಸು ಕಂಡಿದ್ದ ದಿಶಾ ಅಮೃತ್ ಇದಕ್ಕಾಗಿ ಕಠಿಣ ಪರಿಶ್ರಮಪಟ್ಟಿದ್ದಾರೆ. ತಂದೆ ಅಮೃತ್ ಕುಮಾರ್ ಹಾಗೂ ತಾಯಿ ಲೀಲಾ ಅವರ ಪ್ರೋತ್ಸಾಹದಿಂದ ತಮ್ಮ ಗುರಿಯನ್ನು ತಲುಪಿದ್ದಾರೆ.

ಟ್ವೀಟ್‌ ಮೂಲಕ ಅಭಿನಂದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌

ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ನಿವಾಸಿಯಾಗಿದ್ದ ಇವರು ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ವರೆಗೆ ವ್ಯಾಸಂಗ ಮಾಡಿದರು. ನೌಕಾಪಡೆ ಸೇರಬೇಕಂಬ ಕನಸು ಹೊತ್ತಿದ್ದ ಇವರು ಹೈಸ್ಕೂಲ್‌ನಲ್ಲಿ ಎನ್‌ಸಿಸಿ ಸೇರಿದ್ದರು. ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಎನ್‌ಸಿಸಿ ಇಲ್ಲವಾದರೂ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಎನ್‌ಸಿಸಿ ತರಬೇತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: Subhas Chandra Bose : ನೇತಾಜಿಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ? : ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಪ್ರಶ್ನೆ

ಬಳಿಕ ಬೆಂಗಳೂರಿನ ಬಿಎಂಎಸ್ ಸಂಸ್ಥೆಯಲ್ಲಿ ಬಿಇ ವ್ಯಾಸಂಗ ಪೂರೈಸಿದ್ದರು. ಇದೇ ವೇಳೆ ನೌಕಾಪಡೆಯ ಹಲವು ಅರ್ಹತಾ ಪರೀಕ್ಷೆಗಳನ್ನೂ ಇವರು ಎದುರಿಸಿದ್ದಾರೆ. ಹಲವು ಬಾರಿ ವಿಫಲರಾದರೂ ಛಲ ಬಿಡದ ಪ್ರಯತ್ನದಿಂದ ನೌಕಾಪಡೆಯನ್ನು ಸೇರಿಕೊಂಡು ವಿಶೇಷ ಅಧಿಕಾರಿಯಾಗಿ ಸೇವೆ ಆರಂಭಿಸಿದರು. ಈಗ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಅಂಡಮಾನ್ ನಿಕೋಬಾರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Exit mobile version