ಶಿವಮೊಗ್ಗ: ನಮ್ಮ ಸಂವಿಧಾನದ (Republic Day 2023) ಪ್ರಸ್ತಾವನೆಯಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಹಾಗೂ ಸಮಾನ ಅವಕಾಶವನ್ನು ನೀಡಲಾಗಿದೆ ಎಂದು ರೇಷ್ಮೆ, ಯುವ ಜನ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ. ನಾರಾಯಣ ಗೌಡ ನುಡಿದರು.
ಡಿ.ಎ.ಆರ್. ಪೊಲೀಸ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹಲವು ಭಾಷೆ, ಧರ್ಮ, ಪ್ರಾಂತ್ಯಗಳಿಂದ ಕೂಡಿರುವ, ಏಕತೆಯನ್ನು ಸಾರುವ ನಮ್ಮ ದೇಶ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಲಿಖಿತ ಸಂವಿಧಾನವನ್ನು ಹೊಂದಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಆವೃತ್ತಿಗೆ ಪೂರಕವಾಗಿ ಚತುಷ್ಪಥ ರಸ್ತೆಗಳು, ವರ್ತುಲ ರಸ್ತೆಗಳು, ಸೇವೆಗಳು, ಹೊಸ ರೈಲು ಮಾರ್ಗ ಸಂಪರ್ಕಗಳಿಗೆ ಒತ್ತು ನಿಡಲಾಗಿದೆ. ಜಿಲ್ಲೆಯ ಜನತೆಯ ದಶಕಗಳ ಕನಸಾದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. 970 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು ಒಟ್ಟಾರೆ 1469 ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪ್ರಗತಿಯಲ್ಲಿವೆ. ಲೋಕೋಪಯೋಗಿ ಇಲಾಖೆಯ ವತಿಯಿಂದ 104 ರೂ. ವೆಚ್ಚದಲ್ಲಿ 190 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ನಗರೋತ್ಥಾನ ಯೋಜನೆಯಡಿ ಜಿಲ್ಲೆಯ ನಗರಗಳ ಅಭಿವೃದ್ಧಿಗೆ 148 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಸೊರಬ ಮತ್ತು ಹೊಸನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು 28.11 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸಂಪರ್ಕ ಕಲ್ಪಿಸಲು ಜಿಲ್ಲೆಗೆ ಒಟ್ಟು 1031 ಕೋಟಿ ರೂ. ಮಂಜೂರಾಗಿದ್ದು, 2,27,672 ಮನೆಗಳಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದರು.
ಇದನ್ನೂ ಓದಿ | Pathaan Movie: ಸೆನ್ಸಾರ್ ಬೋರ್ಡ್ ಓಕೆ ಮಾಡಿದೆ, ಇನ್ನು ಪಠಾಣ್ ವಿರುದ್ಧ ಪ್ರತಿಭಟಿಸಿ ಅರ್ಥವಿಲ್ಲ! ಹೀಗೆ ಹೇಳಿದ್ದು ಯಾರು?
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತುತ ಸಾಲಿನಲ್ಲಿ 133 ಕೋಟಿ ರೂ. ಬಿಡುಗಡೆ ಮಾಡಿದ್ದು, 328 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪಿಎಂಜಿಎಸ್ವೈ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಈ ಸಾಲಿನಲ್ಲಿ 31 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕಳೆದ 4 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ 476 ಕೋಟಿ ರೂ.ಗಳನ್ನು ಜಿಲ್ಲೆಯ 1,55,859 ರೈತರ ಖಾತೆಗೆ ಜಮಾ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆಯಡಿ 208 ಕೋಟಿ ರೂ. ಮೊತ್ತದ 308 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಸವ ಹಾಗೂ ಅಂಬೇಡ್ಕರ್, ವಸತಿ ಯೋಜನೆಯಡಿ ಜಿಲ್ಲೆಗೆ ಒಟ್ಟು 7688 ಮನೆಗಳ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಅಮೃತ ಗ್ರಾಮ ಯೋಜನೆಯಡಿ ಒಟ್ಟು 11 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಈ ವರ್ಷ ಇದುವರೆಗೆ 28 ಲಕ್ಷ ಮಾನವ ದಿನ ಕೆಲಸ ನೀಡಲಾಗಿದ್ದು, 134 ಕೋಟಿ ರೂ. ಪಾವತಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ | Virat Kohli: ವಿಮೆನ್ಸ್ ಪ್ರೀಮಿಯರ್ ಲೀಗ್: ತಂಡ ಖರೀದಿಗೆ ಸಂತಸ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾ ಅಂಕಣ ನಿರ್ಮಾಣ ಮಾಡಲಾಗುತ್ತಿದೆ. ಅಡಕೆ ತೋಟಗಳಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ 9794 ರೈತರಿಗೆ 1 ಕೋಟಿ ರೂ. ವೆಚ್ಚದಲ್ಲಿ ಉಚಿತವಾಗಿ ಔಷಧ ವಿತರಿಸಲಾಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡ ಜಾನುವಾರುಗಳ ಚರ್ಮಗಂಟು ನಿಯಂತ್ರಣಕ್ಕಾಗಿ ಜಿಲ್ಲೆಯ ಶೇ. 93 ರಷ್ಟು ಜಾನುವಾರುಗಳಿಗ ಲಸಿಕೆ ಹಾಕಲಾಗಿದೆ. ರೋಗದಿಂದ ಮರಣ ಹೊಂದಿದ 329 ಜಾನುವಾರುಗಳ ಮಾಲಕರಿಗೆ 63.95 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಪಡೆ ಹಾಗೂ ವಿವಿಧ ತಂಡಗಳು ಆಕರ್ಷಕ ಪಥ ಸಂಚಲನ ಪ್ರದರ್ಶಿಸಿದವು. ವಿವಿಧ ಶಾಲಾ ಮಕ್ಕಳು ಅತ್ಯುತ್ತಮವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಸರ್ಕಾರಿ ಬಾಲಕರ ಬಾಲ ಮಂದಿರದ ವಿದ್ಯಾರ್ಥಿಗಳು ಪ್ರಥಮ, ಸಾಂದೀಪಿನಿ ಪ್ರೌಢಶಾಲೆಯ ಬಾಲಕಿಯರು ದ್ವಿತೀಯ ಹಾಗೂ ಬಾಲಕರ ಎನ್ ಸಿಸಿ ತಂಡ ತೃತೀಯ ಬಹುಮಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ರುದ್ರೇಗೌಡ, ಮಹಾನಗರಪಾಲಿಕೆ ಮಹಾಪೌರ ಶಿವಕುಮಾರ್, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿ.ಪಂ. ಸಿಇಒ ಎನ್.ಡಿ.ಪ್ರಕಾಶ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ | Karnataka Election: ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡ ಬಿಜೆಪಿ ಸೇರ್ಪಡೆ; ಅಪ್ಪನ ʻಕೈʼಬಿಟ್ಟು ಕಮಲ ಹಿಡಿದ ಮಗ