ಸಾಗರ : ವಿಶ್ವದಲ್ಲಿಯೇ ಅತಿ ಮಹತ್ವದ ಲಿಖಿತ ಸಂವಿಧಾನ (Republic Day 2023) ಹೊಂದಿದ ಹೆಮ್ಮೆ ಭಾರತೀಯರದ್ದು. ಇಂಥ ಸಂವಿಧಾನದ ಉದಾತ್ತ ಆಶಯ ಮತ್ತು ಧ್ಯೇಯೋದ್ದೇಶಗಳನ್ನು ಪಾಲಿಸುವತ್ತ ನಾಗರಿಕರು ಗಮನ ಹರಿಸಬೇಕು ಎಂದು ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ (ಜ.೨೬) ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ತಂಡ ನೀಡಿರುವ ಸಂವಿಧಾನ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಸಂವಿಧಾನದ ಮೂಲಕ ಸಮಾನತೆ, ಸರ್ವರಿಗೂ ಶಿಕ್ಷಣ ದೊರೆತಿದ್ದು, ಮೂಲಭೂತ ಹಕ್ಕುಗಳ ಜೊತೆ ಮೂಲಭೂತ ಕರ್ತವ್ಯಗಳ ಬಗ್ಗೆ ನಾವು ಗಮನ ಹರಿಸಬೇಕು. ಸಂವಿಧಾನದ ಧ್ಯೇಯೋದ್ದೇಶ ಪಾಲಿಸುವತ್ತ ನಾವು ಹೆಚ್ಚು ಗಮನ ಹರಿಸಬೇಕು. ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡು ಬಂದಿರುವ ಏಕೈಕ ದೇಶ ಭಾರತವಾಗಿದ್ದು, ನಾವು ಸಂವಿಧಾನದ ಆಶಯಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ಸಾಗರ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದ್ದು, ಎಲ್ಲರೂ ಇನ್ನಷ್ಟು ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಇದನ್ನೂ ಓದಿ | Kuno Cheetah Health Update: ನಮೀಬಿಯಾದಿಂದ ತರಲಾದ ಚೀತಾಗೆ ಅನಾರೋಗ್ಯ, ಕಿಡ್ನಿಗೆ ಸೋಂಕು
ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ , ಸದೃಢ ಸಂವಿಧಾನ ನೀಡಿದ ಮಹತ್ವದ ದಿನ ಇದಾಗಿದ್ದು, ಸಂವಿಧಾನ ನೀಡಿದ ಹಕ್ಕುಗಳನ್ನು ಚಲಾಯಿಸುವ ಜೊತೆಗೆ ನಮ್ಮ ಮೂಲಭೂತ ಕರ್ತವ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ದೇಶವು ಎಲ್ಲ ರಂಗದಲ್ಲೂ ಅಭಿವೃದ್ಧಿ ಹೊಂದುತ್ತಿದೆ. ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ವಿಶ್ವದಲ್ಲಿಯೇ 5ನೇ ಸ್ಥಾನಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ. ದೇಶವನ್ನು ಒಟ್ಟಾಗಿ ಸೇರಿ ಕಟ್ಟುವ ಕೆಲಸ ಮಾಡುವ ಜೊತೆಗೆ ದೇಶ ಮೊದಲು ಎನ್ನುವ ಸಂಕಲ್ಪ ಎಲ್ಲರೂ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | Mysuru Pak : ಸಿದ್ದರಾಮಯ್ಯಗೆ ಸಿದ್ಧವಾಗುತ್ತಿದೆ 1,000 ಕೆ.ಜಿ. ತೂಕದ ಮೈಸೂರು ಪಾಕ್ ಹಾರ
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಪೊಲೀಸ್ ಉಪಾಧ್ಯಕ್ಷಕ ರೋಹನ್ ಜಗದೀಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಕಮ್ಮಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್. ಹಾಜರಿದ್ದರು.
ಈ ಸಂದರ್ಭದಲ್ಲಿ ಪೊಲೀಸ್, ಗೃಹ ರಕ್ಷಕದಳ, ಎನ್.ಸಿ.ಸಿ., ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಿದ್ಯಾರ್ಥಿ ಪೊಲೀಸ್ ಪಡೆ ಇನ್ನಿತರೆ ತಂಡಗಳಿಂದ ಆಕರ್ಷಕ ಕವಾಯತು ನಡೆಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ | IND vs NZ 1st T20: ಭಾರತ-ನ್ಯೂಜಿಲ್ಯಾಂಡ್ ಮೊದಲ ಟಿ20 ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ