ಬೆಂಗಳೂರು: ತಳವಾರ ಹಾಗೂ ಪರಿವಾರ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಹಾಕಿ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಈ ಎರಡೂ ಸಮುದಾಯಗಳನ್ನು ಈಗಾಗಲೇ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿಗೆ ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ಒಬಿಸಿ ಪಟ್ಟಿಯಿಂದ ಕೈಬಿಡಲಾಗಿದೆ. ಹೀಗಾಗಿ ಇನ್ನು ಮುಂದೆ ಒಬಿಸಿ ಬದಲಾಗಿ ಪರಿಶಿಷ್ಟ ಪಂಗಡದೊಳಗೆ ಗುರುತಿಸಿಕೊಳ್ಳಬೇಕು ಎಂದು ಅಧಿಕೃತವಾಗಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರ 2020ರ ಮಾ.19ರಂದು ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿತ್ತು. ಗೆಜೆಟಿಯರ್‌ನಲ್ಲಿ ನಾಯಕ, ನಾಯಕ್ ಪರ್ಯಾಯ ಪದಗಳಾದ ಪರಿವಾರ ಹಾಗೂ ತಳವಾರ ಜಾತಿಗಳನ್ನು ಒಳಗೊಂಡಂತೆ ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ನೀಡಬಹುದು ಎಂದು ಹೇಳಿತ್ತು.
ಇನ್ನು ರಾಜ್ಯ ಸರ್ಕಾರ ಕಳೆದ ಜೂನ್‌ನಲ್ಲಿ ಹೊರಡಿಸಿದ ಸುತ್ತೋಲೆ ಹಾಗೂ ಆಗಸ್ಟ್‌ನಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಪರಿಶಿಷ್ಟ ಪಂಗಡದ ಪರಿವಾರ ಹಾಗೂ ತಳವಾರ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿತ್ತು.
ಆದರೆ, ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕದೆ ಇರುವುದರಿಂದ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಜಾತಿ ಪ್ರಮಾಣ ಪತ್ರ ಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಈಗ ಸರಕಾರ ಅಧಿಕೃತವಾಗಿ ಪಟ್ಟಿಯಿಂದ ತೆಗೆದುಹಾಕಿರುವುದರಿಂದ ಗೊಂದಲ ಪರಿಹಾರವಾಗಲಿದೆ.