ಬೆಂಗಳೂರು: ಕೇಂದ್ರ ಸರ್ಕಾರದಲ್ಲಿ ಒಬಿಸಿ, ರಾಜ್ಯ ಸರ್ಕಾರದಲ್ಲಿ 2ಎ ಮೀಸಲಾತಿಗಾಗಿ (Reservation) ಆಗ್ರಹಿಸಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ “ಜಗದ್ಗುರುಗಳ ನಡಿಗೆ ಗ್ರಾಮದೆಡೆಗೆ” ಎಂದು ಮೀಸಲಾತಿ ಜಾಗೃತಿ ಅಭಿಯಾನಕ್ಕೆ ಚಾಲನೆ ದೊರೆತಿದೆ.
ವೀರಶೈವ ಲಿಂಗಾಯತ ಪಂಚಮಸಾಲಿಯ ಜಿಲ್ಲಾ ಘಟಕ ಗದಗನಿಂದ ಶುರುವಾಗುವ ಯಾತ್ರೆ ಚಿಕ್ಕೊಪ್ಪ, ಹಿರೆಕೊಪ್ಪ, ಹುಯಿಲಗೋಳದ ಮಾರ್ಗವಾಗಿ ಬಂದು ಗುಜಮಾಗಡಿ, ಕುರಡಗಿ, ಕಿರಟಗೇರಿ, ಕೊಟುಮಚಗಿ, ನಾರಾಯಣಪುರ, ನರೆಗಲ್ಲ ಹಾಗೂ ಅಬ್ಬಿಗೇರಿ, ಬೇಟಗೇರಿ ಮೂಲಕ ಸೋಮವಾರ ಯಾತ್ರೆ ಆರಂಭವಾಗಿದೆ.
ಅಕ್ಟೋಬರ್ 18 ರಂದು ಹೊಂಬಳದಿಂದ ಶುರುವಾಗಿ ವೆಂಕಟಾಪುರ, ಬೆಳಹೊಡ, ಮದಗಾಪೂರ, ಹಿರೆಹಂದಿಗೋಳ, ಹೊಸಳ್ಳಿ ಮಾರ್ಗವಾಗಿ ಬಂದು ಅಂತೂರ ಬೆಂತೂರ, ಕುರ್ತಕೋಟಿ, ಹುಲಕೋಟಿ, ಬಿಂಕದಕಟ್ಟಿ, ಅಸುಂಡಿ ಬಳಿಕ ಮಲಸಮುದ್ರದಲ್ಲಿ ಮುಗಿಯಲಿದೆ. ಅಕ್ಟೋಬರ್ 19ರಂದು ನಾಗಾವಿಯಿಂದ ಶುರುವಾಗುವ ಯಾತ್ರೆಯು 18 ಊರುಗಳಲ್ಲಿ ಜಾಗೃತಿ ಅಭಿಯಾನ ನಡೆದು ಹಳ್ಳಿಕೇರಿಯಲ್ಲಿ ಅಂತ್ಯವಾಗಲಿದೆ.
ನಾವು ಪ್ರೀತಿಯಿಂದ ಮೀಸಲಾತಿ ಪಡೆಯುತ್ತೇವೆ- ವಚನಾನಂದ ಸ್ವಾಮೀಜಿ
ಮೀಸಲಾತಿ ವಿಚಾರವಾಗಿ ಮಾತನಾಡಿದ ವಚನಾನಂದ ಸ್ವಾಮೀಜಿ, ನಾವು ಪ್ರೀತಿಯಿಂದ ಮೀಸಲಾತಿ ಪಡೆಯುತ್ತೇವೆ. ಚುನಾವಣೆಗೂ ಮುನ್ನ ಮೀಸಲಾತಿ ಘೋಷಣೆ ಆಗುತ್ತದೆ ಎಂಬ ವಿಶ್ವಾಸ ಇದೆ. ಅವಸರ, ಒತ್ತಡ, ವೈಯಕ್ತಿಕ ಟೀಕೆ ಮಾಡಿ ಮೀಸಲಾತಿ ಪಡೆಯಲು ಸಾಧ್ಯವಿಲ್ಲವೆಂದು ಪರೋಕ್ಷವಾಗಿ ಕೂಡಲ ಸಂಗಮ ಪಂಚಮಸಾಲಿ ಪೀಠ ಜಯಮೃತ್ಯುಂಜಯ ಶ್ರೀಗಳ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.
ಮೀಸಲಾತಿಗಾಗಿ ಮುತ್ತಿಗೆ ಹಾಕಿ ಹೋರಾಟ ಮಾಡುವವರಲ್ಲ, ನಮ್ಮದು ಸಾತ್ವಿಕ ಹೋರಾಟವಷ್ಟೇ. ಸಂವಿಧಾನ, ಕಾನೂನಾತ್ಮಕ ಹೋರಾಟದಲ್ಲಿ ನಾವು ಗಟ್ಟಿಯಾಗಿದ್ದೇವೆ. ಸರ್ಕಾರದ ವಿರುದ್ಧ ಟೀಕೆ ಮಾಡುವುದು, ಮತ್ತೊಬ್ಬರಿಗೆ ಬೈಯುವುದರಲ್ಲಿ ಆಸಕ್ತಿ ಇಲ್ಲ. ನಮ್ಮ ಸಮುದಾಯದ ಮೀಸಲಾತಿಗೆ ನಾವು ಬದ್ಧರಾಗಿದ್ದೇವೆ, ಆಂತರಿಕವಾಗಿ ನಮ್ಮ ಶಾಸಕರು, ಸಚಿವರು ಕೆಲಸ ಮಾಡುತ್ತಿದ್ದಾರೆ. 2A ಮೀಸಲಾತಿ ಹೋರಾಟಕ್ಕೆ ಇತಿಹಾಸವಿದ್ದು, ಹರಿಹರ ಪಂಚಮಸಾಲಿ ಪೀಠದಿಂದಲೇ 3B ಮೀಸಲಾತಿ ಸಿಕ್ಕಿದೆ. 2A ಮೀಸಲಾತಿ ಅಂದೇ ಆಗಬೇಕಿತ್ತು, ಕಾರಣಾಂತರಗಳಿಂದ ಆಗಿಲ್ಲ ಎಂದರು.
ಇದನ್ನೂ ಓದಿ | ಮತಾಂತರವಾದವರಿಗೆ SCST ಮೀಸಲಾತಿ ಬೇಡ: ವಿಶ್ವ ಹಿಂದು ಪರಿಷತ್ ಆಗ್ರಹ