ಬೆಂಗಳೂರು: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Vidhan Sabha Election) ಸ್ಪರ್ಧಿಸಲೆಂದೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶರೊಬ್ಬರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕಾಂಗ್ರೆಸ್ನಿಂದಲೇ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಬೆಳಗಾವಿಯ ಕುಡಚಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈ ಬಗ್ಗೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ, ಮನವಿ ಮಾಡಿದ್ದಾರೆ. ಕುಡಚಿ ಕ್ಷೇತ್ರದ ಸಂಪೂರ್ಣ ಮಾಹಿತಿಯನ್ನು ಅವರು ಕಲೆಹಾಕಿದ್ದಾರೆ. ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಹೀಗೆ ಚುನಾವಣಾ ಕಣಕ್ಕೆ ಇಳಿಯುವುದಕ್ಕೋಸ್ಕರ ನ್ಯಾಯಾಧೀಶ ಹುದ್ದೆಯನ್ನು ಬಿಟ್ಟವರು ಬಾಬಾ ಸಾಹೇಬ್ ಜಗಮಪ್ಪ ಜಿನರಾಳ್ಕರ್. ಇವರು ಉಡುಪಿ, ದಾವಣಗೆರೆ, ತುಮಕೂರು, ಹಾವೇರಿ ಸೇರಿ ವಿವಿಧ ಸೆಷನ್ಸ್ ಕೋರ್ಟ್ಗಳಲ್ಲಿ ಸುಮಾರು 18 ವರ್ಷಗಳ ಕಾಲ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ. ಅದಕ್ಕೂ ಮೊದಲು ವಕೀಲರಾಗಿದ್ದರು. ಈಗ ರಾಜಕೀಯ ಕ್ಷೇತ್ರಕ್ಕೆ ಇಳಿಯುವ ಮೂಲಕ ಜನಸೇವೆ ಮಾಡಬೇಕು ಎಂದು ನ್ಯಾಯಾಂಗ ವಿಭಾಗವನ್ನು ತೊರೆದಿದ್ದಾರೆ.
ನ್ಯಾಯಾಧೀಶ ಹುದ್ದೆಯನ್ನು ಬಿಟ್ಟು, ರಾಜಕೀಯಕ್ಕೆ ಬರಲು ಕಾರಣವೇನು ಎಂಬ ಬಗ್ಗೆ ವಿಸ್ತಾರ ನ್ಯೂಸ್ನೊಂದಿಗೆ ಮಾಹಿತಿ ಹಂಚಿಕೊಂಡ ಬಾಬಾ ಸಾಹೇಬ್ ಜಗಮಪ್ಪ ಜಿನರಾಳ್ಕರ್, ‘ರಾಜಕೀಯ ಅಧಿಕಾರವೆಂಬುದು ಎಲ್ಲ ಅಭಿವೃದ್ಧಿ ಬಾಗಿಲುಗಳನ್ನೂ ತೆರೆಯಬಲ್ಲ ಮಾಸ್ಟರ್ ಕೀ’ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ನಾವು ಸರ್ಕಾರಿ ಸೇವೆಯಲ್ಲಿದ್ದುಕೊಂಡು ಸೀಮಿತ ವ್ಯಾಪ್ತಿಯಲ್ಲಿ ಜನಸೇವೆ ಮಾಡಬೇಕಾಗುತ್ತದೆ. ಅಷ್ಟೊಂದು ಅವಕಾಶ ಇರುವುದಿಲ್ಲ. ಅದೇ ರಾಜಕೀಯ ಕ್ಷೇತ್ರ ವಿಶಾಲವಾಗಿದೆ. ಅಲ್ಲಿ ಜನರೊಂದಿಗೆ ನೇರ ಸಂಪರ್ಕ ಸಾಧಿಸಬಹುದು. ಅವರ ಸಮಸ್ಯೆಗಳನ್ನು ನೇರವಾಗಿ ಕೇಳಿ ಸ್ಪಂದಿಸಬಹುದು. ಹಾಗಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ನಾನು ಸ್ಥಳೀಯ!
ಕುಡಚಿ ಕ್ಷೇತ್ರದಲ್ಲಿ ಬಿಜೆಪಿಯ ಪಿ.ರಾಜೀವ್ ಅವರು ಎರಡು ಬಾರಿ ಗೆದ್ದು, ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಸಲವೂ ಗೆಲ್ಲುತ್ತೇನೆ ಎಂಬ ಪ್ರಬಲ ಆತ್ಮವಿಶ್ವಾಸದಲ್ಲಿ ಅವರಿದ್ದಾಗ, ರಾಜಕೀಯ ಹಿನ್ನೆಲೆಯೇ ಇಲ್ಲದ ನೀವು ಇಲ್ಲಿ ಯಾವೆಲ್ಲ ಅಂಶಗಳ ಮೂಲಕ ಸ್ಪರ್ಧಿಸುತ್ತೀದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ನಿವೃತ್ತ ನ್ಯಾಯಾಧೀಶರು ‘ಪಿ ರಾಜೀವ್ ಅವರು ಶಿವಮೊಗ್ಗ ಜಿಲ್ಲೆಯವರು. ನಾನು ಮೂಲತಃ ಬೆಳಗಾವಿಯವನೇ. ನಾನು ಸ್ಥಳೀಯ ಎಂಬ ಬಲವಾದ ಅಂಶ ನನ್ನ ಪರವಾಗಿ ಇದೆ. ನಾನು ಇಲ್ಲಿಯವನೇ ಆಗಿದ್ದರಿಂದ ಇಲ್ಲಿನ ಜನರ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಾಗಿ ಅರ್ಥ ಮಾಡಿಕೊಂಡು, ಅದಕ್ಕೆ ಪರಿಹಾರ ಒದಗಿಸಬಹುದು. ಹಾಗೇ, ನಾನು ದಲಿತ ಸಮುದಾಯದವನು. ಕುಡಚಿಯಲ್ಲೂ ದಲಿತ ಸಮುದಾಯದವರೇ ಹೆಚ್ಚಾಗಿದ್ದಾರೆ. ಅದೂ ಕೂಡ ನನಗೆ ಪೂರಕವಾದ ವಿಚಾರ. ಅಷ್ಟಲ್ಲದೇ, ನಾನು ಜಿಲ್ಲಾ ನ್ಯಾಯಾಧೀಶನಾಗಿ ಕೆಲಸ ಮಾಡಿದವನು. ಪಿ.ರಾಜೀವ್ಗಿಂತಲೂ ಹೆಚ್ಚಿನ ಅರ್ಹತೆ ನನಗೆ ಇದೆ’ ಎಂದು ಹೇಳಿಕೊಂಡಿದ್ದಾರೆ.
11 ಜನರಿಂದ ಅರ್ಜಿ
ಬೆಳಗಾವಿ ಕುಡಚಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಪೈಪೋಟಿ ಇದೆ. ಇಲ್ಲಿನ ಮಾಜಿ ಕಾಂಗ್ರೆಸ್ ಶಾಸಕ ಸೇರಿ ಒಟ್ಟು 11 ಮಂದಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರ ಮಧ್ಯೆ ತಮಗೇ ಟಿಕೆಟ್ ಸಿಗುವ ಭರವಸೆ ಇದೆ ಎನ್ನುತ್ತಿದ್ದಾರೆ ನಿವೃತ್ತ ನ್ಯಾಯಾಧೀಶ ಜಿನರಾಳ್ಕರ್. ‘ನಾನು ಎಐಸಿಸಿ ಅಧ್ಯಕ್ಷರಿಂದ ಹಿಡಿದು, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರವರೆಗೆ, ರಾಜ್ಯ ಕಾಂಗ್ರೆಸ್ನ ಹಲವು ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿ ಇದ್ದೇನೆ. ನಾನು ಬಿಜೆಪಿಯ ಪಿ.ರಾಜೀವ್ರನ್ನು ಎದುರಿಸಲು ಸಮರ್ಥ ಅಭ್ಯರ್ಥಿ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ಗೆ ಅರ್ಥ ಮಾಡಿಸುತ್ತೇನೆ ಎಂಬ ಭರವಸೆ ನನಗೆ ಇದೆ. ಉಳಿದಿದ್ದನ್ನು ಅವರು ನಿರ್ಧಾರ ಮಾಡುತ್ತಾರೆ’ ಎಂದು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವೇ ಯಾಕೆ?
ರಾಜಕೀಯಕ್ಕೆ ಬರಬೇಕು ಎಂದರೆ ಬೇರೆ ಪಕ್ಷಗಳೂ ಇದ್ದವು. ಯಾಕೆ ಕಾಂಗ್ರೆಸ್ನ್ನೇ ಆಯ್ಕೆ ಮಾಡಿಕೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ನ್ಯಾಯಾಧೀಶರು ‘ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮಾಜಿಕ ನ್ಯಾಯದ ಪರ ಇರುತ್ತದೆ. ಸಂವಿಧಾನದ ಮೂಲ ತಳಹದಿಗಳೆಲ್ಲವೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇವೆ. ಕಲ್ಯಾಣ ರಾಷ್ಟ್ರ ನಿರ್ಮಾಣದ ಚಿಂತನೆಗಳು ಕಾಂಗ್ರೆಸ್ನಲ್ಲಿವೆ. ಕಾಂಗ್ರೆಸ್ ಯಾವಾಗಲೂ ದಮನಿತರ, ಶೋಷಿತರ, ಹಿಂದುಳಿದವರ ಪರ ಕೆಲಸ ಮಾಡಿಕೊಂಡು ಬರುತ್ತಿದೆ. ಅದರ ಸಮಾಜಮುಖಿ ಧ್ಯೇಯವನ್ನು ನಾನು ಯಾವತ್ತೂ ಬೆಂಬಲಿಸುತ್ತ ಬಂದಿದ್ದೇನೆ. ಹಾಗಾಗಿಯೇ ಕಾಂಗ್ರೆಸ್ನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.
ಟಿಕೆಟ್ ಸಿಗದೆ ಇದ್ದರೆ ಮುಂದೇನು?
ಇಷ್ಟೆಲ್ಲ ಭರವಸೆಯಿಟ್ಟು ಬಂದಿದ್ದೀರಿ. ಆದರೆ ಕಾಂಗ್ರೆಸ್ನಿಂದ ಟಿಕೆಟ್ ಸಿಗದೆ ಇದ್ದರೆ ಏನು ಮಾಡುತ್ತೀರಿ? ಎಂದು ಕೇಳಿದ್ದಕ್ಕೆ ‘ಕಾಂಗ್ರೆಸ್ನಿಂದ ಈಗ ಟಿಕೆಟ್ ಸಿಗದೆ ಇದ್ದರೂ, ಆ ಪಕ್ಷದ ಪರವಾಗಿಯೇ ಕೆಲಸ ಮಾಡುತ್ತೇನೆ’ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: Criminal politics | ರೌಡಿ ಪಾಲಿಟಿಕ್ಸ್ ಅಭಿಯಾನ ತೀವ್ರ: ಬಿಜೆಪಿಯನ್ನು ಗೇಲಿ ಮಾಡಲು ವೆಬ್‌ಸೈಟ್ ತೆರೆದ ಕಾಂಗ್ರೆಸ್