Site icon Vistara News

Ripponpet News: ಆಶಾ, ಅಂಗನವಾಡಿ ಕಾರ್ಯಕರ್ತೆಯರದು ಪರಮ ಶ್ರೇಷ್ಠ ಸೇವೆ: ಶಾಸಕ ಹಾಲಪ್ಪ

MLA Halappa anganwadi workers ripponpet

#image_title

ರಿಪ್ಪನ್‌ಪೇಟೆ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಹಗಲಿರುಳು ತಾಯಿಯಂತೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜದ ರಕ್ಷಣೆಗಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇವೆ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆಂದು ಕ್ಷೇತ್ರದ ಶಾಸಕ ಹಾಗೂ ಎಂ.ಎಸ್.ಐ.ಎಲ್. ಅಧ್ಯಕ್ಷ ಹರತಾಳು ಹಾಲಪ್ಪ ಪ್ರಶಂಸೆ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆ ಸಮೀಪದ ಹರತಾಳು ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾ ಭವನದಲ್ಲಿ ಆಯೋಜಿಸಲಾದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಮಾಡಿ ಮಾತನಾಡಿ, ಸರ್ಕಾರದ ಕನಿಷ್ಠ ವೇತನದ ನೌಕರರಾಗಿದ್ದರೂ ಗರಿಷ್ಠ ಮಟ್ಟದ ಸಮಾಜ ಸೇವೆ ಮಾಡುತ್ತಾ ಹಗಲಿರುಳು ಶ್ರಮಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಾರ್ಥಕ ಸೇವೆ ಪರಿಗಣಿಸಿ ಅವರಿಗೆ ಅಭಿನಂದನೆಗಳ ಜತೆಗೆ ಗೌರವ ಸಮರ್ಪಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.

ರಾಜಕಾರಣ ಅದರಲ್ಲೂ ಶಾಸಕರಾದವರಿಗೆ ಜನಸಾಮಾನ್ಯರ ಮೇಲೆ ಪ್ರೀತಿ, ವಿಶ್ವಾಸ, ಅನುಕಂಪ, ಕರುಣೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳ ಅರಿವಿದ್ದರೆ ಮಾತ್ರ ಆತ ಒಬ್ಬ ಒಳ್ಳೆಯ ಶಾಸಕನಾಗಬಹುದು. ಅದು ಬಿಟ್ಟು ಶಾಸನ ಸಭೆಯಲ್ಲಿ ಜನರ ಸಂಕಷ್ಟಗಳ ಬಗ್ಗೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒಂದು ಅಕ್ಷರ ಮಾತನಾಡದೇ ಬಣ್ಣ ಬಣ್ಣದ ವಸ್ತ್ರವನ್ನು ಧರಿಸಿ ಶುಭ ಸಮಾರಂಭಗಳು, ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನಾಗರಿಕರ ಹೆಗಲ ಮೇಲೆ ಕೈಹಾಕಿ ಫೋಟೊ ಪೋಸ್ ಕೊಟ್ಟರೆ ಸಾಕಾ ಎಂದು ಮಾಜಿ ಶಾಸಕರ ಬಗ್ಗೆ ವ್ಯಂಗ್ಯವಾಡಿದರು.

ಇದನ್ನೂ ಓದಿ: Traffic Fine: ಓವರ್‌ ಸ್ಪೀಡ್‌ಗಾಗಿ ಟ್ರಾಫಿಕ್ ಫೈನ್ ಕಟ್ಟಿದ ಶಾಸಕ ಎಲ್‌. ನಾಗೇಂದ್ರ; ಇವರಿಗೂ ಸಿಕ್ತು ಶೇ. 50 ರಿಯಾಯ್ತಿ!

ನಾಡು ಕಂಡ ಮಹಾನ್ ಹೋರಾಟಗಾರ ಬಡವರ ಬಂಧು ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದ ನನಗೆ ಹೋರಾಟ ಮತ್ತು ಅಭಿವೃದ್ಧಿ ಬಗ್ಗೆ ಒಂದಿಷ್ಟು ಅರಿವಿದೆ. ಅದು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಮತ್ತು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಯಾವುದೇ ಅರಿವಿಲ್ಲದೆ ಹಾಗೆಯೇ ಪರಿಶೀಲನೆ ಮಾಡದೆ, ಶಾಸನ ಸಭೆಯಲ್ಲಿ ಚರ್ಚಿಸದೆ ಎರಡು ಬಾರಿ ನಾನು ಶಾಸಕನಾಗಿದ್ದೆ ಎನ್ನುವ ಪರಿಕಲ್ಪನೆಯಲ್ಲಿ ಬೀಗುವ ಮಾಜಿ ಶಾಸಕರು ಕ್ಷೇತ್ರದಲ್ಲಿ ಜನಮಾನಸದಲ್ಲಿ ಉಳಿಯುವಂತಹ ಯಾವ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆಂದು ಸಾಬೀತುಪಡಿಸಲಿ ಎಂದು ಟೀಕಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮತ್ತು ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವುದರ ಮೂಲಕ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಕುರಿತು ಹಗಲಿರುಳು ಶ್ರಮಿಸುತ್ತಿದ್ದು ನಾವಿಬ್ಬರೂ ಡಬಲ್ ಇಂಜಿನ್ ಇದ್ದಂತೆ. ಕೇಂದ್ರದ ನರೇಂದ್ರ ಮೋದಿ
ಸರ್ಕಾರ ರಾಜ್ಯದ ಬಿ.ಎಸ್‌. ಯಡಿಯೂರಪ್ಪ ಅವರ ಸರ್ಕಾರ ಹಾಗೂ ಈಗಿನ ಬಸವರಾಜ್ ಬೊಮ್ಮಾಯಿ ಸರ್ಕಾರ ಡಬಲ್ ಇಂಜಿನ್ ಸರ್ಕಾರದಂತೆ ಎಂದು ವ್ಯಾಖ್ಯಾನಿಸಿದರು.

ಇದನ್ನೂ ಓದಿ: MS Dhoni-Sourav Ganguly: ಐಪಿಎಲ್​ಗೂ ಮುನ್ನ ಧೋನಿ ಭೇಟಿಯಾದ ಗಂಗೂಲಿ

ತಾ.ಪಂ. ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ, ಬಿಜೆಪಿ ತಾಲೂಕು ಅಧ್ಯಕ್ಷ ಗಣಪತಿ ಬೆಳಗೋಡು, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸರಸ್ವತಿ, ಕಲ್ಲಿಯೋಗೇಂದ್ರ, ಶ್ವೇತಾ, ಪ್ರೇಮ ಪುರುಷೋತ್ತಮ್, ಶೀಲಗಂಗಾ ನಾಯ್ಕ್ , ಸಿಡಿಪಿಒ ಶಶಿರೇಖಾ, ಇನ್ನಿತರರು ಹಾಜರಿದ್ದರು. ಬಿ.ಸರಸ್ವತಿ ಪ್ರಾರ್ಥಿಸಿದರು. ವೇದಾವತಿ ಸ್ವಾಗತಿಸಿದರು. ಶೀಲಾ ಗಂಗಾ ನಾಯ್ಕ್ ವಂದಿಸಿದರು.

Exit mobile version