ಗಂಗಾಧರ ಕಲ್ಲಪಳ್ಳಿ ವಿಸ್ತಾರ ನ್ಯೂಸ್ ಸುಳ್ಯ(ದಕ್ಷಿಣ ಕನ್ನಡ)
ಕಡು ಬೇಸಿಗೆ, ಝಳಪಿಸುವ ಬಿಸಿಲ ಧಗೆ. 40 ಡಿಗ್ರಿಗೂ ಮಿಕ್ಕಿ ಏರುವ ಉಷ್ಣಾಂಶ(Rising temperature). ಭೂಮಿ ಬೆಂದು ಬರಡಾಗಿ ಬಸವಳಿಯುತ್ತಿದ್ದಂತೆ ಜಲಮೂಲಗಳು ಆವಿಯಾಗಿ ಬತ್ತಿ ಬರಡಾಗುತಿವೆ. ಬರಗಾಲದ ಮತ್ತು ನೀರಿಗೆ ಹಾಹಾಕಾರದ ಮುನ್ಸೂಚನೆ ನೀಡಿ ಸುಳ್ಯದ ಜೀವ ನದಿ ಪಯಸ್ವಿನಿ (Payaswini river) ಬತ್ತಿ ಹೋಗಿದೆ. ವಿಶಾಲ ನದಿ ಒಡಲಲ್ಲಿ ಅಲ್ಲಲ್ಲಿ ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ನಿಂತಿದೆ. ಈಗಾಗಲೇ ಸುಳ್ಯ ತಾಲೂಕಿನ ಕೆಲವು ಕಡೆ ನೀರಿನ ಸಮಸ್ಯೆ ಉದ್ಭವಿಸಿದೆ. ಇನ್ನೂ ಹತ್ತು ದಿನ ಉತ್ತಮ ಮಳೆ ಬರದಿದ್ದರೆ ಬರಗಾಲದ ಕರಿ ಛಾಯೆ ಆವರಿಸಿ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಪಯಸ್ವನಿ ನದಿಯಲ್ಲಿ ನೀರಿನ ಹರಿವು ನಿಂತು ಹೋಗಿ ಹಲವು ಕಡೆ ನೀರು ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ಕೆಲವು ಕಡೆ ಮೀನುಗಳು ಮತ್ತಿತರ ಜಲಚರಗಳು ಸಾಯುತ್ತಿವೆ.
7 ವರ್ಷದ ಬಳಿಕ ಬರಗಾಲದ ಛಾಯೆ
ಕಳೆದ ಕೆಲವು ವರ್ಷಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಉತ್ತಮ ಮಳೆ ಸುರಿದ ಕಾರಣ ಪಯಸ್ವಿನಿಯಲ್ಲಿ ನೀರಿನ ಹರಿವು ಕಡಿಮೆಯಾಗಿರಲಿಲ್ಲ. ಕುಡಿಯುವ ನೀರಿಗೂ ಅಷ್ಟಾಗಿ ಸಮಸ್ಯೆ ಎದುರಾಗಲಿಲ್ಲ. ಆದರೆ ಈ ಬಾರಿ ಮಾರ್ಚ್‌ನಲ್ಲಿ ಮಳೆಯೇ ಸುರಿಯಲಿಲ್ಲ, ಏಪ್ರಿಲ್ ಅರ್ಧವಾದರೂ ವರುಣನ ಸುಳಿವಿಲ್ಲ. ಆದುದರಿಂದ ಈ ಬಾರಿ ಮತ್ತೆ ಬರಗಾಲದ ಆತಂಕ ಎದುರಾಗಿದೆ. 2016ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಭೀಕರ ಬರಗಾಲದ ಲಕ್ಷಣ ಕಂಡು ಬಂದಿದೆ. 7 ವರ್ಷದ ಹಿಂದೆ ಪಯಸ್ವಿನಿ ನದಿ ಸಂಪೂರ್ಣ ಬತ್ತಿ ಹೋಗಿ ನೀರಿಗೆ ಹಾಹಾಕಾರ ಉಂಟಾಗಿತ್ತು. ಅಂದು ಮರುಭೂಮಿಯಂತಾಗಿದ್ದ ಪಯಸ್ವಿನಿಯಲ್ಲಿ ಜಲಚರಗಳು ಸಂಪೂರ್ಣ ಸತ್ತು ನಾಶವಾಗಿದ್ದವು. ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗೂ ತತ್ವಾರ ಎದುರಾಗಿತ್ತು.
ಮುಚ್ಚಿ ಹೋಗಿರುವ ನದಿಯ ಜಲ ಸಂಗ್ರಹದ ಹೊಂಡಗಳು
ಹಿಂದೆಲ್ಲಾ ಪಯಸ್ವಿನಿ ನದಿಯಲ್ಲಿ ಭಾರೀ ಪ್ರಮಾಣದ ಹೊಂಡಗಳು, ಗಯಾಗಳು ಇದ್ದವು. ಇವು ನದಿಯ ಜಲಸಂಗ್ರಹದ ಹೊಂಡಗಳಾಗಿತ್ತು. ಎಷ್ಟೇ ಕಠಿಣ ಬೇಸಿಗೆ ಬಂದರೂ ಆ ಹೊಂಡಗಳು ಬತ್ತುತ್ತಿರಲಿಲ್ಲ. ಅಲ್ಲಿ ಸಂಗ್ರವಾಗುವ ನೀರಿದು ನದಿಯನ್ನು ಸದಾ ಜಲಸಮೃದ್ಧವಾಗಿ ಇರಿಸಿತ್ತು. ಆದರೆ ಇಂದು ಅಂತಹ ಹೊಂಡಗಳೇ ಮರೆಯಾಗಿದೆ. ಹೂಳು, ಮರಳು ತುಂಬಿ ಆ ಹೊಂಡಗಳು ಭರ್ತಿಯಾಗಿ ನೀರು ನಿಲ್ಲದಂತಾಗಿದೆ. 2018ರಲ್ಲಿ ಜೋಡುಪಾಲದಲ್ಲಿ ಉಂಟಾದ ಜಲಪ್ರಳಯದಿಂದ ರಾಶಿಗಟ್ಟಲೆ ಮಣ್ಣು, ಮರಳು, ಹೂಳು ಬಂದು ಗಯಗಳು ಮುಚ್ಚಿ ಹೋದವು. ನದಿಯಲ್ಲಿ ನೀರು ಸರಾಗ ಹರಿದು ಸಮುದ್ರ ಸೇರುತ್ತದೆ. ಬೇಸಿಗೆ ಆರಂಭದಲ್ಲೇ ನೀರಿನ ಹರಿವು ನಿಂತು ಹೋಗಿ ಬತ್ತಲು ಆರಂಭಿಸುತ್ತದೆ. ನದಿಯಲ್ಲಿನ ಮರಳು, ಹೂಳು ತೆಗೆಯದ ಕಾರಣ ಬೇಸಿಗೆಯಲ್ಲಿ ಬೇಗನೆ ಬತ್ತಿ ಹೋಗಿ ಬರಗಾಲ, ಮಳೆಗಾಲದಲ್ಲಿ ತುಂಬಿ ಹರಿದು ಜಲ ಪ್ರಳಯ ಉಂಟಾಗುವ ಆತಂಕ ಎದುರಾಗಿದೆ.
ಬತ್ತುತ್ತಿರುವ ಜಲಮೂಲಗಳು
ಬೇಸಿಗೆ ಕಠಿಣವಾಗುತ್ತಿದ್ದಂತೆ ಜಲಮೂಲಗಳು ಒಂದೊಂದೇ ಬತ್ತ ತೊಡಗಿದೆ. ನದಿ, ಹಳ್ಳ ಕೊಳ್ಳಗಳು, ತೋಡು, ತೊರೆ, ಕೆರೆ, ಬಾವಿಗಳಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತ ಕಂಡಿದೆ. ಹಲವೆಡೆ ಬಾವಿಗಳು, ಕೆರೆಗಳು ಬತ್ತಿವೆ. ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಕೃಷಿಗೆ ನೀರು ಹಾಯಿಸುವುದಕ್ಕೂ ತತ್ವಾರ ಉಂಟಾಗಿದೆ.
ನಗರಕ್ಕೆ ಸದ್ಯ ನೀರಿನ ಸಮಸ್ಯೆ ಇಲ್ಲ
ಸುಳ್ಯ ನಗರಕ್ಕೆ ಕುಡಿಯಲು ಮತ್ತು ಅಗತ್ಯಕ್ಕೆ ಪಯಸ್ವಿನಿಯೇ ಮೂಲ. ನಗರ ಪಂಚಾಯತ್ ವತಿಯಿಂದ ಪಯಸ್ವಿನಿಯಿಂದ ನೀರು ಎತ್ತಿ ಸರಬರಾಜು ಮಾಡಲಾಗುತ್ತದೆ. ಈಗ ಕಲ್ಲುಮುಟ್ಲುವಿನಲ್ಲಿ ಕಟ್ಟ ಕಟ್ಟಿ ನೀರು ಸಂಗ್ರಹಿಸಿ ಸರಬರಾಜು ಮಾಡಲಾಗುತ್ತದೆ. ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲಾ. ಆದರೆ ಒಂದು ವಾರದಲ್ಲಿ ಮಳೆ ಬಾರದೇ ಇದ್ದರೆ ಸಮಸ್ಯೆ ಎದುರಾಗುವ ಆತಂಕ ಇದೆ ಎನ್ನುತ್ತಾರೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ.
ಇದನ್ನೂ ಓದಿ : Climate Danger : ಕರ್ನಾಟಕ ಸೇರಿ ಒಟ್ಟು 14 ರಾಜ್ಯಗಳಿಗೆ ಗಂಡಾಂತರ! ವಿಶ್ವದಲ್ಲೇ ಅಪಾಯದಲ್ಲಿರುವ ರಾಜ್ಯಗಳಿವು!