ಚಿಕ್ಕಬಳ್ಳಾಪುರ: ಅವರೆಲ್ಲಾ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಂದಿನಂತೆ ತಮ್ಮ ಕೆಲಸ ಕಾರ್ಯಗಳಿಗೆ ಹೋಗಲು ಆತುರದಲ್ಲೇ ಟಾಟಾ ಸುಮೋ ಹತ್ತಿ ಹೊರಟಿದ್ದರು. ಆದರೆ ವಿಧಿಯಾಟ ಬಲ್ಲವರು ಯಾರು? ಭೀಕರ ಅಪಘಾತಕ್ಕೆ (Road Accident) ಸಿಲುಕಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗದಷ್ಟು ಸಾವಿನ ಮನೆ ಸೇರಿದ್ದಾರೆ.
ಅಬ್ಬಾ.. ಇದೊಂದು ಚಿತ್ರವನ್ನು ನೋಡಿದರೆ ಎದೆ ಝಲ್ ಎನಿಸುತ್ತದೆ. ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಡಿಕ್ಕಿ ಹೊಡೆದ ಟಾಟಾ ಸುಮೋ ನಜ್ಜುಗುಜ್ಜಾಗಿತ್ತು. ಟಾಟಾ ಸುಮೋದಲ್ಲಿದ್ದ 13 ಜನರ ದೇಹವೆಲ್ಲ ಛಿದ್ರ ಛಿದ್ರವಾಗಿ ಬಿದ್ದಿತ್ತು. ತಮ್ಮವರ ಸಾವಿನ ಸುದ್ದಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರದ ಮುಂದೆ ಬಂದಿದ್ದ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರ ಗೋಳಾಟ, ಕಣ್ಣೀರು ಪೊಲೀಸ್ ಸಿಬ್ಬಂದಿಯ ಕರುಳು ಚುರುಕ್ ಎನ್ನುವಂತೆ ಮಾಡಿತ್ತು. ಕುಟುಂಬಸ್ಥರಿಗೆ ಸ್ವತಃ ಅಧಿಕಾರಿಗಳೇ ಸಮಾಧಾನಪಡಿಸುತ್ತಿದ್ದರು.
ಆಂಧ್ರಪ್ರದೇಶದ ಗೋರೆಂಟ್ಲಾ ಮಂಡಲದಿಂದ ಸುಮಾರು ಹತ್ತು ಮಂದಿ ಹಾಗೂ ಚಾಲಕ ಸೇರಿದಂತೆ ಕರ್ನಾಟಕ ಮೂಲದ ಮೂವರು ತಮ್ಮ ಕೆಲಸಕಾರ್ಯಗಳಿಗೆ ತಲುಪಲು ಟಾಟಾ ಸುಮೋ ಹತ್ತಿದ್ದರು. 1+6 ಸೀಟ್ ಇರುವ ಟಾಟಾ ಸುಮೋದಲ್ಲಿ ಬರೋಬ್ಬರಿ 12 ಮಂದಿ ಪ್ರಯಾಣಿಕರನ್ನು ತುಂಬಿಸಿಕೊಂಡು ಅತಿ ವೇಗವಾಗಿ ಹೊರಟಿದ್ದ.
ಚಿಕ್ಕಬಳ್ಳಾಪುರ ತಾಲೂಕಿನ ಚಿತ್ರಾವತಿ ಸಮೀಪ ಬರುತ್ತಿದ್ದಂತೆ ಕೂಗಳತೆ ದೂರದಲ್ಲಿ ನಿಂತಿದ್ದ ಸಿಮೆಂಟ್ ಬಲ್ಕರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ. ಡಿಕ್ಕಿಯ ರಭಸಕ್ಕೆ ಮುಂದೆ ಕುಳಿತಿದ್ದ 6 ಮಂದಿ ಸ್ಥಳದಲ್ಲೇ ಜೀವ ಬಿಟ್ಟಿದ್ದರು. ಇನ್ನುಳಿದವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದರು. ಉಸಿರು ಬೀಗಿಹಿಡಿದುಕೊಂಡಿದ್ದ 50 ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಇದನ್ನೂ ಓದಿ: Road Accident : ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ದುರ್ಮರಣ; ಪ್ರಪಾತಕ್ಕೆ ಉರುಳಿದ ಕಾರು, ಬಸ್
ತಾಯಿ ಮಡಿಲಿನಲ್ಲಿ ಕುಳಿತಿದ್ದ 6 ವರ್ಷ ಬಾಲಕ ಸಾವು
ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶದ 10 ಮಂದಿ ಹಾಗೂ ಕರ್ನಾಟಕದ ಮೂವರು ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಮೂಲದ ಅರುಣಾ ಎಂಬುವವರು ತಮ್ಮ 6 ವರ್ಷದ ಮಗನೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ಜವರಾಯನ ಅಟ್ಟಹಾಸಕ್ಕೆ ಬಲಿಯಾದರು.
ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಮಗನ ಗೋಳು ಮುಗಿಲು ಮುಟ್ಟುವಂತಿತ್ತು. ಬಾಗೇಪಲ್ಲಿ ಮೂಲದ ಮಾರ್ಗಾನುಕುಂಟೆ ನಿವಾಸಿ ನರಸಿಂಹಮೂರ್ತಿ, ಇನ್ನುಳಿದ ಆಂಧ್ರಪ್ರದೇಶದ ಗೋರೆಂಟ್ಲಾ ಮಂಡಲಂ ನಿವಾಸಿಗಳಾದ ನರಸಿಂಹಪ್ಪ, ಪರಿಮಿಳಿ ಪವನ್ ಕುಮಾರ್, ಸುಬ್ಬಮ್ಮ ರಾಜವರ್ಧನ್, ಶಾಂತಮ್ಮ, ವೆಂಕಟರಮಣ ಹಾಗೂ ನಾರಾಯಣಪ್ಪ ,ದಂಪತಿಗಳಾದ ಬೆಲ್ಲಾಲ ವೆಂಕಟಾದ್ರಿ ಬೆಲ್ಲಾಲ ಲಕ್ಷ್ಮಿ, ಗಣೇಶ್ ಎಂಬುವವರು ಮೃತ ದುರ್ದೈವಿಗಳು.
ಮೃತರ ಕುಟುಂಬಸ್ಥರಿಗೆ ಶಾಸಕರ ಸಾಂತ್ವನ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಸಕ ಪ್ರದೀಪ್ ಈಶ್ವರ್‌ಗೆ ಫೋನ್ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ ಮೃತರ ಕುಟುಂಬಸ್ಥರಿಗೆ ತಲಾ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಆಂಧ್ರಪ್ರದೇಶದ ಪೆನುಗೊಂಡ ತಾಲೂಕಿನ ಶಾಸಕ ಶಂಕರನಾರಾಯಣ ಕುಟುಂಬಸ್ಥರಿಗೆ ಸಂತ್ವಾನ ಹೇಳಿ, ಮೃತರ ಅಂತ್ಯ ಸಂಸ್ಕಾರಕ್ಕೆಂದು ವೈಯಕ್ತಿವಾಗಿ ತಲಾ ಹತ್ತು ಸಾವಿರ ರೂ. ಧನ ಸಹಾಯ ಮಾಡಿದರು. ಜತೆಗೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗುವುದು ಎಂಬ ಭರವಸೆ ನೀಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ