Site icon Vistara News

Road Accident : ಹೈವೇಯಲ್ಲಿ ವೇಗವಾಗಿ ಬಂದ 10 ಚಕ್ರದ ಲಾರಿ ಪಲ್ಟಿ!

Lorry Accident

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹೊರಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 10 ಚಕ್ರದ ಲಾರಿಯೊಂದು (Road Accident) ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಲಾರಿ (Lorry Accident) ಉರುಳಿ ಬಿದ್ದಿದೆ.

ಮೂಡಿಗೆರೆಯಿಂದ ಪ್ಲೇವುಡ್ ತುಂಬಿಕೊಂಡು ಮಹಾರಾಷ್ಟ್ರ ಕಡೆಗೆ ಲಾರಿ ಹೊರಟಿತ್ತು. ವೇಗವಾಗಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳೀಯರು ಲಾರಿಯಲ್ಲಿ ಸಿಲುಕಿ ನರಳಾಡುತ್ತಿದ್ದ ಚಾಲಕ ಮತ್ತು ಕ್ಲೀನರ್‌ನನ್ನು ರಕ್ಷಿಸಿದ್ದಾರೆ.

ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗೊಂಡವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮೈಸೂರು ‘ಡೆಡ್ಲಿ’ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ; ಒಬ್ಬನ ಸಾವು, ನಾಲ್ವರಿಗೆ ಗಾಯ

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Mysore Expressway) ಕೆಲ ದಿನಗಳಿಂದ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ ಬೆನ್ನಲ್ಲೇ ಮತ್ತೊಂದು ಅಪಘಾತ ಸಂಭವಿಸಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಬಳಿಯ ಹೆದ್ದಾರಿಯಲ್ಲಿ ಅಪರಚಿತ ವಾಹನಕ್ಕೆ ಕಾರು ಡಿಕ್ಕಿಯಾಗಿ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಅಪರಿಚಿತ ವಾಹನಕ್ಕೆ ಕಾರು ಡಿಕ್ಕಿಯಾಗಿದೆ. ಇದಾದ ಬಳಿಕ ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಆನೇಕಲ್‌ ಮೂಲದ ಕಿಶೋರ್‌ ಬಾಬು (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ನಾಲ್ವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಹೊತ್ತಿ ಉರಿದ ಕಾರು

ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಇವರು ಆನೇಕಲ್‌ನಿಂದ ಊಟಿಗೆ ತೆರಳುತ್ತಿದ್ದರು. ಕಾರು ಹೊತ್ತಿ ಉರಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಸಂಖ್ಯೆ ಇಳಿಕೆ

ಕೆಲ ದಿನಗಳಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹಾಗೂ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಮೇ ತಿಂಗಳಿನಲ್ಲಿ ನಡೆದ ಅಫಘಾತಗಳಲ್ಲಿ ಒಟ್ಟು 29 ಮಂದಿ ಪ್ರಾಣ ಕಳೆದುಕೊಂಡಿದ್ದರು. ಜೂನ್‌ ತಿಂಗಳಲ್ಲಿ ಈ ಸಂಖ್ಯೆ 28 ಆಗಿತ್ತು. ಆದರೆ ಈ ಸಂಖ್ಯೆ ಜುಲೈ ತಿಂಗಳ ಹೊತ್ತಿಗೆ 8ಕ್ಕೆ ಇಳಿದಿದೆ. ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಸಾವು ಸಂಭವಿಸಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದರು.

ಈ ನಡುವೆ ಮುಂದಿನ ದಿನಗಳಲ್ಲಿ ಅಪಘಾತ ಸಂಖ್ಯೆ ಮತ್ತಷ್ಟು ಇಳಿಮುಖ ಆದ್ರೆ ವೇಗ ಮಿತಿ ಏರಿಕೆಗೆ ಚಿಂತನೆ ಇದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. ಇದು ನಿಜವಾದರೆ ಈಗ ಇರುವ ಪ್ರತಿ ಗಂಟೆಗೆ 100 ಕಿಮೀ ವೇಗಮಿತಿ 120ಕಿ.ಮೀಗೆ ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version