ಹಾಸನ: ಇಲ್ಲಿನ ಬೇಲೂರು ತಾಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗ್ರಾಮದ ಪುಟ್ಟಸ್ವಾಮಿ ಮತ್ತು ಸರೋಜ ದಂಪತಿಯ ಇಬ್ಬರು ಗಂಡು ಮಕ್ಕಳು ಬೇರೆ ಬೇರೆ ವರ್ಷವಾದರೂ ಒಂದೇ ತಿಂಗಳು ಒಂದೇ ದಿನ (Road Accident) ಮೃತಪಟ್ಟಿದ್ದಾರೆ.
ಪುಟ್ಟಸ್ವಾಮಿ ಹಾಗೂ ಸರೋಜ ದಂಪತಿಯ ಎರಡನೇ ಮಗನಾದ ದಿಲೀಪ್ ಜ.4 ರಂದು ಬೇಲೂರು ತಾಲೂಕಿನ ರಾಯಪುರ ಬಳಿ ನಡೆದ ಬೈಕ್ ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ. ಅತಿ ವೇಗವಾಗಿ ಬೈಕ್ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಹೊಲಕ್ಕೆ ನುಗ್ಗಿತ್ತು. ಕೆಳಗೆ ಬಿದ್ದ ದಿಲೀಪ್ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ದಿಲೀಪ್ ಜ.9ರಂದು ಮೃತಪಟ್ಟಿದ್ದರು.
ದುರಂತ ಎಂದರೆ ಒಂದು ವರ್ಷದ ಹಿಂದೆ ಇದೇ ದಿನಾಂಕ 9-1-2022ರಂದು ಅನಾರೋಗ್ಯದಿಂದ ದಿಲೀಪ್ ಅಣ್ಣ ಶ್ರೀಧರ್ (22) ಕೊನೆಯುಸಿರೆಳೆದಿದ್ದರು. ಇತ್ತ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಧಿಯಾಟಕ್ಕೆ ಬಂಧುಮಿತ್ರರು, ಗ್ರಾಮಸ್ಥರು ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ | IND VS SL | ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಟೀಮ್ ಇಂಡಿಯಾ